ADVERTISEMENT

ಜಲಾನಯನ ಅವ್ಯವಹಾರ: ಲೋಕಾಯುಕ್ತ ದೂರಿಗೆ ಆಗ್ರಹ

ಅಮಾಸೆಬೈಲು ಗ್ರಾಮಸಭೆ:

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 10:27 IST
Last Updated 4 ಜುಲೈ 2013, 10:27 IST

ಸಿದ್ದಾಪುರ: ಜಲಾನಯನ ಇಲಾಖೆ ಕಾಮಗಾರಿ ಅವ್ಯವಹಾರದಿಂದ ಗ್ರಾಮಸ್ಥರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಅವ್ಯವಹಾರ  ವಿರುದ್ದ ಅರ್ಜಿ ವಿಚಾರಣಾ ಸಮಿತಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಬೇಕೆಂದು ಅಮಾಸೆಬೈಲು ಪಂಚಾಯಿತಿ ಸದಸ್ಯರು  ಅಮಾಸೆಬೈಲು ಗ್ರಾಮಸ್ಥರು ಆಗ್ರಹಿಸಿದರು.

ಶನಿವಾರ ಅಮಾಸೆಬೈಲು  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆದ ಅಮಾಸೆಬೈಲು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಅಧ್ಯಕ್ಷ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜಡ್ಡಿನಗದ್ದೆ, ಕೆಳಸುಂಕ ಭಾಗಗಳಲ್ಲಿ ರಸ್ತೆ ಹಾಳಾಗಿರುವುದು. ರೇಶನ್ ಕಾರ್ಡು ಗೊಂದಲ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ, ಜಡ್ಡಿನಗದ್ದೆ ದೊಡ್ಡಹಕ್ಲು ರಾಮ ನಾಯ್ಕರ ಮನೆ ಸಮೀಪದ ರಸ್ತೆಗೆ ಮೋರಿ ಹಾಕದೇ ಉಂಟಾಗುತ್ತಿರುವ ಸಮಸ್ಯೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ನೀರಿನ ವ್ಯವಸ್ಥೆಗಾಗಿ ಪೈಪುಗಳನ್ನು ಅಳವಡಿಸಿ ಹಲವು ತಿಂಗಳು ಕಳೆದರೂ ಯೋಜನೆಯನ್ನು ಪೂರ್ಣಗೊಳಿಸದಿರುವುದು, ಮೋರಿ ರಚಿಸಬೇಕಾದ ಕಡೆಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರ ಪರವಾಗಿ ಸೇತುವೆ ನಿರ್ಮಾಣಕ್ಕೆ ಸಹಕರಿಸಿರುವುದು, ಮಳೆಗಾಲದಲ್ಲಿ ಅರಣ್ಯ ಇಲಾಖೆಯಿಂದ ರೈತರಿಗೆ ಸಸಿ ವಿತರಣೆ ಸೇರಿದಂತೆ ವಿವಿಧ ಮಾಹಿತಿ ಹಾಗೂ ಸಮಸ್ಯೆಗಳಿಗೆ ಉತ್ತರ ನೀಡಬೇಕಾದ  ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗೆ ಬಾರದಿರುವುದು  ಮುಂತಾದ ವಿಷಯಗಳ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತ ಪಡಿಸಿದರು.

ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಟ್ಟಾಡಿ ನವೀನಚಂದ್ರ ಶೆಟ್ಟಿ, ಪಂಚಾಯಿತಿ ಉಪಾಧ್ಯಕ್ಷ ಶೇಖರ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿ, ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಪಿ.ಡಿ.ಒ ಗೋಪಾಲ ದೇವಾಡಿಗ ವರದಿ ಸಲ್ಲಿಸಿ, ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.