ADVERTISEMENT

ನಾಮಫಲಕ ಕನ್ನಡದಲ್ಲಿರಲಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 10:50 IST
Last Updated 15 ಅಕ್ಟೋಬರ್ 2011, 10:50 IST

ಕಾರ್ಕಳ: `ಉಡುಪಿ ಜಿಲ್ಲೆಯಲ್ಲಿ ನಾಮಫಲಕಗಳು ಕನ್ನಡದಲ್ಲಿರುವಂತೆ ಜಿಲ್ಲಾಡಳಿತದ ಮೂಲಕ ಯತ್ನ ನಡೆಯಬೇಕು~ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ವಿ.ಎಸ್.ಆಚಾರ್ಯ ಇಲ್ಲಿ ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಜಾಗೃತಿಗಾಗಿ ಹಮ್ಮಿಕೊಂಡಿರುವ ಕನ್ನಡ ನುಡಿತೇರು ಜಾಗೃತಿ ಜಾಥಾ ಉಡುಪಿ ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ಸಂಜೆ ಕಾರ್ಕಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಮಂಜುನಾಥ ಪೈ ಸ್ಮಾರಕ ಸಾಂಸ್ಕೃತಿಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಚಾರ್ಯ `ಜಿಲ್ಲೆಯ ಎಲ್ಲ ಫಲಕಗಳ ಮೊದಲ ಸಾಲು ಕನ್ನಡದಲ್ಲಿರಬೇಕು. ಫಲಕದಲ್ಲಿ ನಂತರದ ಸಾಲನ್ನು ಯಾವ ಭಾಷೆಯಲ್ಲಾದರೂ ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕು. ಎಲ್ಲ ರಾಜ್ಯಗಳಲ್ಲೂ ಎಲ್ಲ ಭಾಷೆಗಳಿರಬೇಕು. ರಾಜ್ಯದಲ್ಲೂ ಎಲ್ಲ ಭಾಷೆಗಳಿಗೂ ಅವಕಾಶವಿದೆ ಎಂದರು. 

`ಸರ್ಕಾರವು ಕನ್ನಡದ ಅಭಿವೃದ್ಧಿಗಾಗಿ ಈ ಬಾರಿ 250 ಕೋಟಿ ರೂಪಾಯಿ ವಿನಿಯೋಗಿಸುತ್ತಿದೆ. ಇಂದು ಸುಧಾರಣೆಗಳು ಸಾಕಷ್ಟು ನಡೆದರೂ ಪ್ರಾದೇಶಿಕ ಅಸಮಾನತೆ ತೊಡೆದುಹಾಕಲು ಸಾಧ್ಯವಾಗಿಲ್ಲ.  ಹೈದರಾಬಾದ್ ಕರ್ನಾಟಕ ಪ್ರದೇಶ ಗಮನಿಸಿದರೆ ಇದು ರಾಜ್ಯದ ಭಾಗವೇ ಎಂಬಷ್ಟು ಬೇಸರ ಬರುತ್ತಿದೆ~ ಎಂದು ವಿಷಾದಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಸಕ ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ತಾ.ಪಂ ಅಧ್ಯಕ್ಷ ಜಯರಾಮ್ ಸಾಲ್ಯಾನ್, ತಹಸೀಲ್ದಾರ್ ಜಗನ್ನಾಥ ರಾವ್, ಪುರಸಭಾ ಅಧ್ಯಕ್ಷೆ ಪ್ರತಿಮಾ ಮೋಹನ್, ಜಿ. ಪಂ ಸದಸ್ಯ ಉದಯ ಎಸ್.ಕೋಟ್ಯಾನ್, ಆನಂದ ಭಂಡಿಮಠ, ವಿಷ್ಣು ನಾಯ್ಕ, ಸಾಹಿತಿ ಪ್ರೊ.ಎಂ.ರಾಮಚಂದ್ರ, ಬಿ.ಸಿ.ರಾವ್ ಶಿವಪುರ, ನಾಗರಾಜ ಮೂರ್ತಿ, ಎಚ್.ಕೆ.ಗಣಪಯ್ಯ, ಇ.ಒ ರಾಜೇಂದ್ರ ಬೇಕಲ್,  ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT