ADVERTISEMENT

`ನಿವೇಶನ ರಹಿತರಿಗೆ ವಸತಿ ಸೌಲಭ್ಯ: ಪ್ರಸ್ತಾವನೆ'

​ಪ್ರಜಾವಾಣಿ ವಾರ್ತೆ
Published 29 ಜನವರಿ 2013, 9:11 IST
Last Updated 29 ಜನವರಿ 2013, 9:11 IST
ಉಡುಪಿಯಲ್ಲಿ ಸೋಮವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿದರು. ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಪೌರಾಯುಕ್ತ ಗೋಕುಲ್‌ದಾಸ್ ನಾಯಕ್ ಇದ್ದಾರೆ.
ಉಡುಪಿಯಲ್ಲಿ ಸೋಮವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿದರು. ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಪೌರಾಯುಕ್ತ ಗೋಕುಲ್‌ದಾಸ್ ನಾಯಕ್ ಇದ್ದಾರೆ.   

ಉಡುಪಿ: `ನಿವೇಶನ ರಹಿತರಿಗೆ ವಸತಿ ನೀಡಲು ಉಡುಪಿಯ ಮಿಶನ್ ಕಾಂಪೌಂಡು, ನಿಟ್ಟೂರು, ಇಂದ್ರಾಳಿ  ಹಾಗೂ ಪುತ್ತೂರಿನಲ್ಲಿ ಸರ್ಕಾರಿ ಸ್ಥಳವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ' ಎಂದು ಉಡುಪಿ ನಗರ ಸಭೆಯ ಅಧ್ಯಕ್ಷ ಕಿರಣ್‌ಕುಮಾರ್ ಹೇಳಿದರು.

ಸೋಮವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ  ವಿರೋಧ ಪಕ್ಷದ ನಾಯಕ ಜಯಾನಂದ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಿವೇಶನ ರಹಿತರಿಂದ 1,287 ಅರ್ಜಿಗಳು ಬಂದಿದ್ದು, ವಾಜಪೇಯಿ ವಸತಿ ಯೋಜನೆಯಲ್ಲಿ 340 ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. 108 ಜನರಿಗೆ ಸಹಾಯಧನ ನೀಡಲಾಗಿದೆ ಉಳಿದ ಅರ್ಜಿಗಳಲ್ಲಿ ಕೆಲವು ತೊಡಕುಗಳಿದ್ದು, ಸಹಾಯಧನ ನೀಡಲಾಗಿಲ್ಲ ಎಂದರು.

ನಿವೇಶನ ರಹಿತರಿಗೆ ವಸತಿ ಕೊಡಲು ಸರ್ಕಾರಿ ಜಾಗದ ಕೊರತೆ ಇದೆ, ಆದರೂ 3-4 ಕಡೆ  ಸ್ಥಳವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗು ವುದು ಎಂದು ತಿಳಿಸಿದರು.

ಕಿನ್ನಿಮೂಲ್ಕಿ ಸ್ವಾಗತ ಗೋಪುರದ ರಸ್ತೆ ದುರಸ್ತಿಯಾಗಿ ಆರೇ ತಿಂಗಳಿನಲ್ಲಿ ಡಾಂಬರು ಕಿತ್ತು ಹೋಗಿದೆ ಎಂದು ಅಮೃತಾ ಕೃಷ್ಣಮೂರ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ಕಿರಣ್ ಆ ಕಾಮಗಾರಿಯ ಗುತ್ತಿಗೆಯನ್ನು ವಹಿಸಿದ್ದ  ಕಿಶೋರ್ ಅವರಿಗೆ  ನೋಟಿಸ್ ನೀಡಲಾಗಿದೆ. ಅಲ್ಲದೆ ಆವರು ಕಳೆದ ಒಂದು ವರ್ಷದ ಹಿಂದೆ ವಹಿಸಿಕೊಂಡ ಕೆಲವು ಕಾಮಗಾರಿಗಳನ್ನು ಇನ್ನೂ ಆರಂಭಿಸಿಲ್ಲ, ದೂರವಾಣಿ ಮೂಲಕ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದರು. ತಕ್ಷಣ ಅವರು ಕಾಮಗಾರಿ ಮಾಡದಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸಿ, ತುರ್ತು ಟೆಂಡರ್ ಕರೆದು ಅವರಿಗೆ ನೀಡಿದ ಕಾಮಗಾರಿಗಳನ್ನು ಬೇರೆಯವರಿಗೆ ನೀಡಲಾಗುವುದು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯೆ ವಸಂತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಜನ ಗುಟ್ಕಾ-ಮಟ್ಕಾಕ್ಕೆ ಹಣ ಖರ್ಚು ಮಾಡುತ್ತಾರೆ, ಆದರೆ ಇದ್ದ ಶೌಚಾ ಲಯಕ್ಕೆ ್ಙ1 ನೀಡಿ ಮೂತ್ರ ವಿಸರ್ಜನೆ ಮಾಡುತ್ತಿಲ್ಲ. ಈ ಬಗ್ಗೆ ಪೊಲೀಸರೇ ಕ್ರಮ ಕೈಗೊಳ್ಳಬೇಕು ಎಂದರು.

ನಗರಸಭೆಯಿಂದ ಚರ್ಮ ಕುಟೀರ ನಿರ್ಮಿಸಿಕೊಟ್ಟಿದ್ದರೂ ಕೆಲವೆಡೆ ರಸ್ತೆ ಬದಿಯಲ್ಲಿ ಚಮ್ಮಾರಿಕೆ ಮಾಡುತ್ತಿರು ವುದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಸುಮಿತ್ರ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಚರ್ಮ ಕುಟೀರವನ್ನು 13 ಮಂದಿಗೆ ಮಾತ್ರ ನೀಡಲಾಗಿದೆ. ಚಮ್ಮಾರಿಕೆ ಮಾಡುವವರು ಹೆಚ್ಚಿನ ಜನರಿದ್ದು, ಅವರಿಗೆ ಚರ್ಮ ಕುಟೀರ ನೀಡಲು ಸರ್ಕಾರ ಸುತ್ತೋಲೆ ಹೊರಡಿಸಿದರೆ ನೀಡಲಾಗುತ್ತದೆ. ನಗರದ ಹಲವೆಡೆ ಗೂಡಂಗಡಿಗಳನ್ನು ವಿಸ್ತರಣೆ ಮಾಡಿರುವ ಬಗ್ಗೆ ಗಮಕ್ಕೆ ಬಂದಿದ್ದು ತೆರವುಗೊಳಿಸಿ ಎಂದರು.

ಆಡಳಿತ -ಪ್ರತಿಪಕ್ಷ ವಾಗ್ವಾದ: ಸಚಿವರಾಗಿ ಡಾ.ವಿ.ಎಸ್.ಆಚಾರ್ಯ ಅವರು ಉಡುಪಿಯ ಅಭಿವೃದ್ಧಿ ಕಾರ್ಯಗಳಿಗೆ 452 ಕೋಟಿ ರೂಪಾಯಿ ಸರ್ಕಾರದ ಅನುದಾನ ತರುವಲ್ಲಿ ಕಾರಣರಾಗಿದ್ದಾರೆ. ಹಿಂದೆ 20ವರ್ಷದಲ್ಲಿ ಸಚಿವರಾದವರಿಂದ ಒಂದು ಕೋಟಿ ತರಲು ಸಾಧ್ಯವಾಗಿಲ್ಲ ಹಾಗೂ ಕೊಂಕಣ ರೈಲು ಆರಂಭಿಸಲು ಜಾರ್ಜ್ ಫರ್ನಾಂಡಿಸ್ ಹೊರತು ಬೇರೆ ಯಾವ ಫರ್ನಾಂಡಿಸರು ಅಲ್ಲ ಎಂಬ ಡಾ.ಎಂ.ಆರ್.ಪೈ ಅವರ ಮಾತು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ವಾಗ್ವಾದಕ್ಕೆ ಕಾರಣವಾಯಿತು.

ಆಚಾರ್ಯ ಅವರ ಪುತ್ಥಳಿಯನ್ನು ಶೀಘ್ರವಾಗಿ ಅನಾವರಣ ಮಾಡಬೇಕು. ಅಲ್ಲದೆ ಉಡುಪಿ ನಗರದ ಪ್ರಮುಖ ರಸ್ತೆಗೆ ಆಚಾರ್ಯರ ಹೆಸರನ್ನಿಡಬೇಕು. ಜಾರ್ಜ್ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಕೊಂಕಣ ರೈಲು ನಿಲ್ದಾಣಕ್ಕೆ ಸಂಪರ್ಕಿ ಸುವ ರಸ್ತೆಗೆ ಅವರ ಹೆಸರನ್ನಿಡಬೇಕು ಹಾಗೂ ಕೊಂಕಣ ರೈಲ್ವೇ ಅಭಿವೃದ್ಧಿ ನಿಗಮದ ಮೂಲಕ ಮಾತುಕತೆ ನಡೆಸಿ ಉಡುಪಿಯ ರೈಲು ನಿಲ್ದಾಣದಲ್ಲಿ ಜಾರ್ಜ್ ಫರ್ನಾಂಡಿಸ್ ಪ್ರತಿಮೆ ಸ್ಥಾಪನೆಗೆ ನಗರ ಸಭೆ ಮುಂದಾಗಬೇಕು ಪೈ ವಿನಂತಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಫೆಬ್ರುವರಿ 14ರ ಒಳಗೆ ಆಚಾರ್ಯರ ಪುತ್ಥಳಿ ಅನಾವರಣ ಮಾಡಲಾಗುವುದು. ಜಾರ್ಜ್ ಫರ್ನಾಂಡಿಸ್ ಪ್ರತಿಮೆ ಸ್ಥಾಪನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಪೌರಾಯುಕ್ತ ಗೋಕುಲ್‌ದಾಸ್ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.