ADVERTISEMENT

ಪಳ್ಳಿಗದ್ದೆ ನಿವಾಸಿಗಳಿಗೆ ಇನ್ನೂ ದೊರೆಕಿಲ್ಲ ಸವಲತ್ತು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 8:18 IST
Last Updated 4 ಸೆಪ್ಟೆಂಬರ್ 2013, 8:18 IST
ನಕ್ಸಲ್ ನಿಗ್ರಹ ಪಡೆಯ ಯೋಧರು ವರ್ಷದ ಹಿಂದೆ ನಕ್ಸಲರಿಗಾಗಿ ಬಾಗಿಮಲೆ ಕಾಡಿನತ್ತ ಹೆಜ್ಜೆ ಹಾಕಿದ ದೃಶ್ಯ 	(ಸಂಗ್ರಹ ಚಿತ್ರ)
ನಕ್ಸಲ್ ನಿಗ್ರಹ ಪಡೆಯ ಯೋಧರು ವರ್ಷದ ಹಿಂದೆ ನಕ್ಸಲರಿಗಾಗಿ ಬಾಗಿಮಲೆ ಕಾಡಿನತ್ತ ಹೆಜ್ಜೆ ಹಾಕಿದ ದೃಶ್ಯ (ಸಂಗ್ರಹ ಚಿತ್ರ)   

ಸುಬ್ರಹ್ಮಣ್ಯ: ನಕ್ಸಲ್ ತಂಡದ ಸದಸ್ಯ ರಾಯಚೂರಿನ ಎಲ್ಲಪ್ಪ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಯೋಧರ ಗುಂಡಿಗೆ ಬಲಿಯಾಗಿ ಬುಧವಾರ ಒಂದು ವರ್ಷ ಪೂರೈಸಿದೆ. ಆದರೆ ನಕ್ಸಲರು ಬಂದು ಹೋದ ಇಲ್ಲಿಗೆ ಸಮೀಪದ ಪಳ್ಳಿಗದ್ದೆಯ 5 ಮನೆಗಳ ಮಂದಿಯ ಆತಂಕ ಇನ್ನೂ ದೂರವಾಗಿಲ್ಲ, ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳೂ ನಡೆದಿಲ್ಲ.

ಪುಷ್ಪಗಿರಿ ವನ್ಯಧಾಮ, ಆನೆ ಕಾರಿಡಾರ್‌ನಂತಹ ವಿಷಯಗಳನ್ನು ಕೈಗೆತ್ತಿಕೊಂಡು ಜನರ ವಿಶ್ವಾಸ ಗಳಿಸಲು ಬಂದಿದ್ದ ನಕ್ಸಲರು ಪಳ್ಳಿಗದ್ದೆಯಲ್ಲಿ ಓಡಾಡಿದ್ದರು. ಚೇರು, ಭಾಗ್ಯ, ಎರ್ಮಾಯಿಲ್ ನಡುತೋಟ ಮುಂತಾದ ಕಡೆಗಳಲ್ಲೂ ಕಾಡಿನಂಚಿನ ಮನೆಗಳಿಗೆ ಬಂದು ಆಹಾರ ಸಾಮಗ್ರಿ ಸಾಗಿಸಿದ್ದರು. ಬೇರೆ ಕಡೆಗಳಲ್ಲಿನ ನಕ್ಸಲರ ಮೂಲ ಕಂಡುಕೊಳ್ಳಲು ವಿಫಲರಾಗಿದ್ದ ಎಎನ್‌ಎಫ್ ಸಿಬ್ಬಂದಿಗೆ  ಪಳ್ಳಿಗದ್ದೆಗೆ ನಕ್ಸಲರ ಬಂದುದು ಪ್ರಬಲ ಪುರಾವೆಯಾಗಿ ದೊರೆತಿತ್ತು. ನಕ್ಸಲರ ಜಾಡು ಹಿಡಿದ ಯೋಧರು, ಬಿಸಿಲೆ ಸಮೀಪ ಎನ್‌ಕೌಂಟರ್ ನಡೆಸಿ ಎಲ್ಲಪ್ಪ ಎಂಬಾತನನ್ನು ಕೊಂದು ಹಾಕಿದ್ದರು.

ಈ ಎನ್‌ಕೌಂಟರ್ ಆದ ದಿನದಿಂದಲೂ ನಕ್ಸಲರು ಭೇಟಿ ನೀಡಿದ ಮನೆಗಳ ಮಂದಿ ಭಯದ ನೆರಳಲ್ಲೇ ಬದುಕುತ್ತಿದ್ದಾರೆ. ನಕ್ಸಲರು ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಆತಂಕ ಅವರನ್ನು ಇನ್ನೂ ಬಿಟ್ಟಿಲ್ಲ. ಮೊದ ಮೊದಲು ಇಲ್ಲಿನ ನಿವಾಸಿಗಳು ಸಂಜೆಯಾಗುತ್ತಲೇ ಮನೆಗೆ ಬೀಗ ಹಾಕಿ ಬಂಧುಗಳ ಮನೆಗೆ ತೆರಳುತ್ತಿದ್ದರು. ಅವರ ಬೇಡಿಕೆಗಳಿಗೆ ಮಾತ್ರ ಇದುವರೆಗೆ ಯಾರೂ ಸ್ಪಂದಿಸಿಲ್ಲ.

ಪರ್ಯಾಯ ವ್ಯವಸ್ಥೆಯ ಬಗ್ಗೆ ಬೇಡಿಕೆ ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಹಿರಿಯ ಕಿರಿಯ ಅಧಿಕಾರಿಗಳು ಸಂಪೂರ್ಣ ಸಹಕಾರ ಸೌಕರ್ಯದ ಭರವಸೆಯನ್ನು ಹರಿಯ ಬಿಟ್ಟು ತೆರಳಿದವರು ಮತ್ತೆ ತಲೆಹಾಕಿಲ್ಲ. ಈ ಭಾಗಗಕ್ಕೆ ದಾರಿ ದೀಪದ ವ್ಯವಸ್ಥೆ, ರಸ್ತೆ ಡಾಂಬರೀಕರಣ ಇತ್ಯಾದಿ ಮೂಲಸೌಕರ್ಯ ಸೇರಿದಂತೆ ವಾಸ್ತವ್ಯ ಹೊಂದಿದ ಜಾಗ ಹಾಗೂ ಕೃಷಿ ಜಾಗಗಳಿಗೆ ಇನ್ನೂ ಪಹಣಿ ಪತ್ರ ಒದಗಿಸಿಲ್ಲ. ನಕ್ಸಲ್ ಪ್ಯಾಕೇಜ್ ಘೋಷಣೆಗೆ ಮಾತ್ರ ಸೀಮಿತವಾಗಿದೆ.ಅತಂತ್ರ ಸ್ಥಿತಿಯಲ್ಲಿ ಇಲ್ಲಿಯ ವಾಸಿಗಳು ದಿನದೂಡುತ್ತಿದ್ದಾರೆ.

ಕರಾಳ ನೆನಪು: ಕಳೆದ ವರ್ಷ ಆಗಸ್ಟ್ 22ರಂದು ಎರ್ಮಾಯಿಲ್, ಮರುದಿನ ಚೇರು ಗ್ರಾಮದಲ್ಲಿ ಆಗಸ್ಟ್ 24 ರಂದು ಭಾಗ್ಯ ಎಂಬಲ್ಲಿ ಕೆಲವು ಮನೆಗಳಿಗೆ ಭೇಟಿ ನೀಡಿದ್ದ ನಕ್ಸಲರು ತಮಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದರು. ಬಳಿಕ ನಕ್ಸಲರ ತಂಡ ಕೈಕಂಬ, ನಡುತೋಟ ಕಾಡಿನೊಳಗಿನ ನಡೆದು ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆಯ 5 ಮನೆಗಳಿಗೆ ಭೇಟಿ ನೀಡಿದ್ದರು. ಭಾನುವಾರ ಸಂಜೆ ವೇಳೆಗೆ ಪಾದೆಕಾಡು ಎಂಬಲ್ಲಿಯ ಭೂತದ ಕಲ್ಲು ಪ್ರದೇಶಕ್ಕೆ ಬರುವ ಖಚಿತ ಮಾಹಿತಿ ಮೇರೆಗೆ ಎಎನ್‌ಎಫ್ ಪಡೆ ಹೊಂಚು ಹಾಕಿ ಕಾದು ಕುಳಿತಿತ್ತು.

ಸಂಜೆ ವೇಳೆ 5.30ರ ಸಮಯಕ್ಕೆ 5-6ಮಂದಿ ನಕ್ಸಲರ ತಂಡ ಮತ್ತು ಎಎನ್‌ಎಫ್ ಪಡೆಯ ಮಧ್ಯೆ ಗುಂಡಿನ ಚಕಮಕಿ ನಡೆದು ನಕ್ಸಲರು ಕೈಬಾಂಬ್ ಎಸೆದು ಪರಾರಿಯಾಗಿದ್ದರು. 2 ತಂಡಗಳ ಮಧ್ಯೆ ಗುಂಡಿನ ಕಾಳಗ ನಡೆದು ನಕ್ಸಲರು ಹಳ್ಳದ ಮೂಲಕ ಕಾಡಿನಲ್ಲಿ ಪರಾರಿಯಾಗಿದ್ದರು. ಎಎನ್‌ಎಫ್ ಪಡೆ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಕುಲ್ಕುಂದದಿಂದ ಬಿಸಿಲೆ ಮಾರ್ಗವಾಗಿ ತೆರಳುವ ಬಿಸಿಲೆ ಗಡಿಯಲ್ಲಿ ಚೌಡೇಶ್ವರಿ ದೇವಿಯ ಗುಡಿಯ ಸಮೀಪ ಬಾಗಿಮಲೆ ಅರಣ್ಯದಲ್ಲಿ 8 ಕಿ.ಮೀ. ಕಾಡಿನ ಒಳಗೆ ಸೆ.4ರಂದು ಎನ್‌ಕೌಂಟರ್ ನಡೆದಾಗ ಎಲ್ಲಪ್ಪ ಹತನಾಗಿದ್ದ. ನಂತರ ಪರಾರಿಯಾದ ನಕ್ಸಲ್ ತಂಡ, ಹಾಸನ ಜಿಲ್ಲೆಯತ್ತ ಮುಖಮಾಡಿತ್ತು.

ಸಕಲೇಶಪುರ, ಸಿಂಕೇರಿ ಗ್ರಾಮದಲ್ಲಿ ಕಾಣಿಸಿಕೊಂಡು ಸಿಕ್ಕಿಹಾಕಿಕೊಳ್ಳುವ ಹಂತದಲ್ಲಿ ಶರಣಾಗತಿಯ ಪ್ರಸ್ತಾಪದ ನಾಟಕವಾಡಿತ್ತು. ಸರ್ಕಾರ ಕಾರ್ಯಾಚರಣೆ ಮೊಟಕುಗೊಳಿಸಿದ ಪರಿಣಾಮ ನಕ್ಸಲರು ಸುರಕ್ಷಿತ ತಾಣ ತಲುಪುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಪರಾರಿಯಾದ ನಕ್ಸಲರು ಮತ್ತೆ ಸುಬ್ರಹ್ಮಣ್ಯದತ್ತ ಬರಬಹುದೇ ಎಂಬ ಆತಂಕ ಈ ಭಾಗದಲ್ಲಿ ಈಗಲೂ ನೆಲೆಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.