ADVERTISEMENT

ಪ್ರಮುಖರಿಗೆ ಪರ್ಯಾಯ ವಾರ್ಡ್ ಅನಿವಾರ್ಯ

ಉಡುಪಿ ನಗರಸಭೆ: ಮಹಿಳಾ ಮೀಸಲಾತಿಯಿಂದ ವಾರ್ಡ್ ಕಳೆದುಕೊಂಡ ಅಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ

ಎಂ.ನವೀನ್ ಕುಮಾರ್
Published 6 ಡಿಸೆಂಬರ್ 2012, 6:58 IST
Last Updated 6 ಡಿಸೆಂಬರ್ 2012, 6:58 IST

ಉಡುಪಿ: ರಾಜ್ಯ ಸರ್ಕಾರ ಹೈಕೋರ್ಟ್ ಸೂಚನೆಯಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಾರ್ಡ್‌ವಾರು ಕರಡು ಮೀಸಲಾತಿ ಪ್ರಕಟಿಸಿದ್ದು, ಉಡುಪಿಯ 18ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿದ್ದು, ನಗರಸಭೆ ಅಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ ಪ್ರಮುಖರು ಬೇರೆ ವಾರ್ಡ್‌ಗೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಮಹಿಳಾ ಮೀಸಲಾತಿ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ಸಹ ಏರು ಪೇರಾಗುವ ಸಾಧ್ಯತೆ ಇದೆ. ಉಡುಪಿ ನಗರಸಭೆ ಗದ್ದುಗೆಯನ್ನು ಯಾವ ಪಕ್ಷ ಏರಲಿದೆ ಎಂಬ ಚರ್ಚೆಯೂ ಈಗಾಗಲೇ ಆರಂಭವಾಗಿದೆ. ತಮ್ಮ ವಾರ್ಡ್ ಕಳೆದಕೊಂಡವರಲ್ಲಿ ಕೆಲವರು ಬೇರೆ ವಾರ್ಡ್‌ನಲ್ಲಿ ಚುನಾವಣೆಗೆ ನಿಲ್ಲಲು ಯೋಚಿಸುತ್ತಿದ್ದರೆ, ಇನ್ನೂ ಕೆಲವರು ಚುನಾವಣೆಯಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.

35 ವಾರ್ಡ್‌ಗಳಲ್ಲಿ 18 ವಾರ್ಡ್‌ಗಳನ್ನು  ಮಹಿಳೆಯರಿಗೆ ಮೀಸಲಿಟ್ಟಿರುವ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಪ್ರಮುಖರು ಉಳಿದ 17 ವಾರ್ಡ್‌ಗಳಲ್ಲಿ ಯಾವು ದಾದರೂ ಒಂದು ವಾರ್ಡ್ ಆಯ್ಕೆ ಮಾಡಿಕೊಂಡು ಸ್ಪರ್ಧಿಸಬೇಕಾಗದ ಅನಿವಾರ್ಯತೆ ಎದುರಾಗಿದೆ.
ನಗರಸಭೆಯ ಹಾಲಿ ಅಧ್ಯಕ್ಷ ಕಿರಣ್ ಕುಮಾರ್ ಅವರು ಹಿಂದಿನ ಚುನಾವಣೆಯಲ್ಲಿ ಬಡಗುಬೆಟ್ಟು ವಾರ್ಡ್‌ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಆ ವಾರ್ಡ್ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದೆ. ಆದ್ದರಿಂದ ಕಿರಣ್ ಅವರು ಬೇರೊಂದು ವಾರ್ಡ್ ಹುಡುಕಿಕೊಳ್ಳಬೇಕಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಮೀನುಗಾರರ ಮಾರಾಟ ಮಹಾ ಮಂಡಲದ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅವರೂ ಮೀಸಲಾತಿಯಿಂದ ವಾರ್ಡ್ ಕಳೆದುಕೊಂಡಿದ್ದಾರೆ. ಅವರು ಹಿಂದೆ ಅಜ್ಜರಕಾಡು ವಾರ್ಡ್‌ನಿಂದ ಆಯ್ಕೆಯಾಗಿದ್ದರು. ಆ ವಾರ್ಡ್ ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಬೇರೆ ವಾರ್ಡ್ ನೋಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರು ಈ ಹಿಂದೆ ಗೆದ್ದಿದ್ದ ಗುಂಡಿಬೈಲು ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.

ಇಂದ್ರಾಳಿ ವಾರ್ಡ್‌ನಿಂದ ಆಯ್ಕೆಯಾಗಿದ್ದ ಜಯಕಿರಣ ರಾವ್ ಅವರೂ ಬೇರೆ ವಾರ್ಡ್ ಹುಡುಕಿಕೊಳ್ಳದೆ ವಿಧಿಯಿಲ್ಲ. ನಗರಸಭೆ ವಿರೋಧ ಪಕ್ಷದ ನಾಯಕ ಜಯಾನಂದ್ ಅವರ ವಾರ್ಡ್ ಮಹಿಳೆಯರಿಗೆ ಮೀಸಲಾಗಿಲ್ಲ. ನಗರಸಭೆಯಲ್ಲಿ ಇರುವ ಏಕೈಕ ಪಕ್ಷೇತರ ಅಭ್ಯರ್ಥಿ ನಿತ್ಯಾನಂದ ಒಳಕಾಡು ಅವರ ಬೈಲೂರು ವಾರ್ಡ್ ಸಹ ಮಹಿಳೆ ಪಾಲಾಗಿದೆ.

ಚುನಾವಣೆಗೆ ನಿಲ್ಲುವುದಿಲ್ಲ: `ಆಡಳಿತ ಅವಧಿಯಲ್ಲಿ ನನ್ನ ವಾರ್ಡ್‌ನಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಅಲ್ಲಿ ಸ್ಪರ್ಧಿಸಿದರೂ ಗೆಲ್ಲಬಹುದು. ಆದರೆ ನನ್ನ ವಾರ್ಡ್ ಅನ್ನು ಮಹಿಳೆಗೆ ಮೀಸಲಿಡಲಾಗಿದೆ. ಬೇರೆ ವಾರ್ಡ್‌ನಿಂದ ಸ್ಪರ್ಧಿಸುವ ಬಗ್ಗೆ ಯಾವುದೇ ಯೋಚನೆ ಇಲ್ಲ. ನಗರಸಭೆ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಗೆಲವು ಸಾಧಿಸಿದ್ದೇನೆ. ಮೊದಲ ಬಾರಿಗೆ ನಗರಸಭೆ ಉಪಾಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಎರಡನೇ ಬಾರಿ ಅಧ್ಯಕ್ಷಗಿರಿಯೇ ಸಿಕ್ಕಿದೆ. ಬೇರೆಯವರಿಗೂ ಅವಕಾಶ ಸಿಗಲಿ ಎಂಬುದು ನನ್ನ ಅಪೇಕ್ಷೆ' ಎಂದು ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.

ಉಡುಪಿ ನಗರಸಭೆ ಒಟ್ಟು ಮೂವತ್ತೈದು ವಾರ್ಡ್ ಹೊಂದಿದೆ. ಹಾಲಿ 28 ಮಂದಿ ಬಿಜೆಪಿ ಸದಸ್ಯರು, ಆರು ಮಂದಿ ಕಾಂಗ್ರೆಸ್ ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈಗಾಗಲೇ ಹದಿನೈದು ಮಂದಿ ಮಹಿಳಾ ಪ್ರತಿನಿಧಿಗಳು ನಗರಸಭೆಯಲ್ಲಿದ್ದಾರೆ. ಫೆಬ್ರುವರಿ 14ಕ್ಕೆ ಬಿಜೆಪಿ ಆಡಳಿತ ಅವಧಿ ಕೊನೆಯಾಗಲಿದೆ.

ವಾರ್ಡ್ ಕಳೆದುಕೊಂಡವರು ಏನಂತಾರೆ
ಚುನಾವಣೆಗೆ ಸ್ಪರ್ಧಿಸೋಲ್ಲ

ನಗರಸಭೆ ಚುನಾ ವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಗೆಲವು ಸಾಧಿಸಿದ್ದೇನೆ. ಮೊದಲ ಬಾರಿಗೆ ನಗರಸಭೆ ಉಪಾಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಎರಡನೇ ಬಾರಿ ಅಧ್ಯಕ್ಷಗಿರಿಯೇ ಸಿಕ್ಕಿದೆ. ಬೇರೆಯವ ರಿಗೂ ಅವಕಾಶ ಸಿಗಲಿ ಎಂಬುದು ನನ್ನ ಅಪೇಕ್ಷೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
ಕಿರಣ್ ಕುಮಾರ್, ನಗರಸಭೆ ಅಧ್ಯಕ್ಷ

ಉತ್ತಮ ಕೆಲಸ ಮಾಡುತ್ತೇನೆ
ಮಹಿಳಾ ಮೀಸಲಾತಿ ಹಿನ್ನೆಲೆಯಲ್ಲಿ ನನ್ನ ವಾರ್ಡ್ ಕಳೆದುಕೊಂಡಿದ್ದೇನೆ. ಬೇರೆ ವಾರ್ಡ್‌ನಿಂದ ಸ್ಪರ್ಧಿಸುವುದಿಲ್ಲ. ನಮ್ಮ ವಾರ್ಡ್‌ನಲ್ಲೇ ಇರುವ ಉತ್ತಮ ವಾಗಿ ಕೆಲಸ ಮಾಡಬಲ್ಲ ಮಹಿಳೆ ಯನ್ನು ಚುನಾವ ಣೆಗೆ ನಿಲ್ಲಿಸಿ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸುವ ಗುರಿ ಇದೆ
ಪ್ರಭಾಕರ ಪೂಜಾರಿ,  ಸ್ಥಾಯಿ ಸಮಿತಿ ಅಧ್ಯಕ್ಷ

ಮಲ್ಪೆ,ಒಳಕಾಡು ಆಯ್ಕೆ
ಅಜ್ಜರಕಾಡು ವಾರ್ಡ್ ನಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಆ ವಾರ್ಡ್‌ನಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಅಷ್ಟೇ ಮಾತ್ರ ಇನ್ನೂ ಹಲವಾರು ವಾರ್ಡ್‌ಗಳಲ್ಲಿ ಓಡಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಜನರ ವಿಶ್ವಾಸ ಗಳಿಸಿದ್ದೇನೆ. ಮಲ್ಪೆ, ಒಳಕಾಡು ಸೇರಿದಂತೆ ಒಟ್ಟು ಐದು ವಾರ್ಡ್‌ಗಳಲ್ಲಿ ಒಂದು ಒಂದನ್ನು ಆಯ್ಕೆ ಮಾಡಿಕೊಳ್ಳಲು ಯೋಚಿಸು ತ್ತಿದ್ದೇನೆ. ಎಲ್ಲಿ ನಿಂತರೂ ಗೆಲ್ಲುವೆ
ಯಶ್‌ಪಾಲ್ ಸುವರ್ಣ, ಸದಸ್ಯ

ಮಣಿಪಾಲದಿಂದ ಸ್ಪರ್ಧೆ
ಮುಂದಿನ ಚುನಾವಣೆಯಲ್ಲಿ ಮಣಿಪಾಲ ವಾರ್ಡ್‌ನಿಂದ ಸ್ಪರ್ಧೆ ಗಿಳಿಯಲು ನಿರ್ಧರಿಸಿದ್ದೇನೆ. ಹಲವು ವಾರ್ಡ್‌ಗಳ ಜನರು ನಾನು ಮಾಡಿದ ಕೆಲಸ ನೋಡಿದ್ದಾರೆ. ಆದ್ದರಿಂದ ಯಾವುದೇ ವಾರ್ಡ್‌ನಿಂದ ನಿಂತರೂ ಬೆಂಬಲ ಸಿಗುವ ವಿಶ್ವಾಶ ಇದೆ.
ಜಯಕಿರಣ ರಾವ್, ಸದಸ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.