ADVERTISEMENT

ಬಿ.ಜೆ.ಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 8:05 IST
Last Updated 3 ಅಕ್ಟೋಬರ್ 2012, 8:05 IST

ಬ್ರಹ್ಮಾವರ: ರಾಜ್ಯದಲ್ಲಿ ಸರ್ಕಾರದ ಬದಲಾವಣೆ ಬೇಕು ಎಂದು ಬಿ.ಜೆ.ಪಿಗೆ ಹೋದವರು ಇಂದು ಪಕ್ಷದಲ್ಲಿನ ಅನೇಕ ಭಿನ್ನಾಭಿಪ್ರಾಯಗಳಿಂದ ಬೇಸತ್ತು ಅನೇಕ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ನೀಲಾವರದಲ್ಲಿ ಭಾನುವಾರ ಅವರು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಸರ್ಕಾರದಲ್ಲಿ ಇಂದು ನೆಮ್ಮದಿ ಕೇಂದ್ರಗಳಿಂದ ಜನರ ನೆಮ್ಮದಿ ಹಾಳಾಗಿದೆ. ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರದ ಯೋಜನೆಗಳೆಂದು ಬಿಂಬಿಸಲಾಗುತ್ತಿದೆ. ಕೇವಲ ಪ್ರಚಾರದ ಕಡೆ ಗಮನಕೊಡುತ್ತಿರುವ ಬಿಜೆಪಿ ನಾಯಕರು ಸಾಮಾನ್ಯ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ನೀಲಾವರ ದೇವಾಡಿಗರ ಬೆಟ್ಟಿನ 50ಕ್ಕೂ ಹೆಚ್ಚು ಯುವಕರು ಬಿ.ಜೆ.ಪಿ.ಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಉಡುಪಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ಎಸ್.ನಾರಾಯಣ, ತಾಲ್ಲೂಕು ಪಂಚಾಯಿತಿ ಸದಸ್ಯ ಉಮೇಶ್ ನಾಯ್ಕ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ವಿನ್ಸೆಂಟ್ ಮಸ್ಕರೇನಸ್, ಸಂತೋಷ್ ಕುಮಾರ್ ಹೆಗ್ಡೆ, ಕುಂಜಾಲು ಗ್ರಾ.ಪಂ ಸದಸ್ಯ ಬಾವತೀಸ್ ಡಿಸೋಜಾ, ಬ್ರಹ್ಮಾವರ ಯೂತ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ, ಚೇರ್ಕಾಡಿ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.