ADVERTISEMENT

ಬೈಂದೂರು ಕ್ಷೇತ್ರ: ಚುನಾವಣೆಗೆ ಭರದ ಸಿದ್ಧತೆ

ವಿವಿಧ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 13:49 IST
Last Updated 13 ಏಪ್ರಿಲ್ 2018, 13:49 IST

ಬೈಂದೂರು: ಬೈಂದೂರು ತಾಲ್ಲೂಕು ಕೇಂದ್ರವಾದ ಬಳಿಕ ನಡೆಯುತ್ತಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇದೇ ಮೊದಲ ಬಾರಿ ಬೈಂದೂರು ಕೇಂದ್ರವಾಗಿ ಗಮನ ಸೆಳೆಯುತ್ತಿದೆ.

ಕ್ಷೇತ್ರದ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ಪಿ. ಶ್ರೀನಿವಾಸ್ ಹೊಸ ತಾಲ್ಲೂಕು ಕಚೇರಿಯಲ್ಲಿ ಚುನಾವಣಾ ಕಚೇರಿ ತೆರೆಯಲಾಗಿದೆ. ಅಲ್ಲಿಂದಲೇ ಎಲ್ಲ ಸಿದ್ಧತೆ ನಡೆಸುವುದರ ಜತೆಗೆ ಕ್ಷೇತ್ರದಾದ್ಯಂತ ವಿವಿಧ ಹೊಣೆ ನಿರ್ವಹಿಸಬೇಕಾದ ಅಧಿಕಾರಿ ಸಮೂಹಕ್ಕೆ ಮಾರ್ಗದರ್ಶನ, ನಿರ್ದೇಶನ ನೀಡುವ ಕೆಲಸದಲ್ಲಿ ಇದೀಗ ತಲ್ಲೀನರಾಗಿದ್ದಾರೆ. ತಹಶೀಲ್ದಾರ್ ಪುರಂಧರ ಹೆಗ್ಡೆ ಸಹಾಯಕ ಚುನಾವಣಾಧಿಕಾರಿಯಾಗಿ ಅವರಿಗೆ ಸಹಕಾರ ನೀಡು
ತ್ತಿದ್ದಾರೆ. ಜಿಲ್ಲಾ ಮೀನುಗಾರಿಕಾ ಉಪ ನಿರ್ದೇಶಕಿ ಅಂಜನಾದೇವಿ ಚುನಾವಣಾ ನೀತಿ ಸಂಹಿತೆ ಪಾಲನೆ ಹೊಣೆ ನಿರ್ವಹಿಸುತ್ತಿದ್ದಾರೆ.

ಗುರುವಾರ ಅವರು ಅಧಿಕಾರಿಗಳ ಎರಡನೆ ಸುತ್ತಿನ ಸಭೆ ನಡೆಸಿದ ಬಳಿಕ ಅವರನ್ನು ಭೇಟಿಯಾಗಿ ಚುನಾವಣಾ ಸಿದ್ಧತೆಗಳ ಬಗೆಗೆ ವಿಚಾರಿಸಿದ ’ಪ್ರಜಾವಾಣಿ’ಗೆ ಆ ಕುರಿತು ಮಾಹಿತಿ ನೀಡಿದರು.

ADVERTISEMENT

ಮತಗಟ್ಟೆಗಳ ನಿರ್ವಹಣೆ: ಬೈಂದೂರು ವಿಧಾನ ಸಭಾ ಕ್ಷೇತ್ರ ಬೈಂದೂರು ಇಡೀ ತಾಲ್ಲೂಕನ್ನು ಮತ್ತು ಕುಂದಾಪುರ ತಾಲ್ಲೂಕಿನ ಭಾಗವನ್ನು ಒಳಗೊಂಡಿದೆ. ಇಲ್ಲಿ ಒಟ್ಟು 246 ಮತಗಟ್ಟೆಗಳಿದ್ದು ಇದೇ ಮೊದಲ ಬಾರಿಗೆ ಶಿರೂರು ಗ್ರಾಮ ಪಂಚಾಯಿತಿ ಕಚೇರಿಯ ಮತಗಟ್ಟೆಯನ್ನು ಮಹಿಳಾ ಸ್ನೇಹಿ ಮತಗಟ್ಟೆಯಾಗಿಸಿ ಅಲ್ಲಿಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತದಾನ ಕೇಂದ್ರವನ್ನು ಮತಗಟ್ಟೆ ಅಧಿಕಾರಿ ಸೇರಿ ಐವರು ನಿರ್ವಹಿಸುವರು. ಅವರಲ್ಲಿ ಒಬ್ಬರು ಇದೇ ಮೊದಲ ಬಾರಿ ಬಳಕೆಯಾಗುವ ಮತ ಚಲಾವಣೆ ಖಾತರಿ ಉಪಕರಣವಾದ ವಿವಿ ಪಾಟ್ ನಿರ್ವಹಿಸುವರು. ಎಲ್ಲ ಕೇಂದ್ರಗಳಿಗೂ ಅಧಿಕಾರಿಗಳ ನೇಮಕವಾಗಿದ್ದು ಅವರಲ್ಲಿ ಮತಗಟ್ಟೆ ಅಧಿಕಾರಿ ಮತ್ತು ಪ್ರಥಮ ಮತದಾನಾಧಿಕಾರಿಗೆ ಕುಂದಾಪುರದಲ್ಲಿ ಎರಡು ಸುತ್ತಿನ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ನೀತಿ ಸಂಹಿತೆ ಪಾಲನೆ: ನಾಮಪತ್ರ ಸ್ವೀಕಾರ ಮತ್ತು ನೀತಿ ಸಂಹಿತೆ ಪಾಲನೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು 17ರಿಂದ 24ರ ವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಆ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ ಐವರಿಗಿಂತ ಅಧಿಕ ಜನರಿಗೆ, ಮೂರಕ್ಕಿಂತ ಅಧಿಕ ವಾಹನಗಳಿಗೆ ಕಚೇರಿ ಆವರಣ ಪ್ರವೇಶಿಸುವ ಅವಕಾಶ ಇರುವುದಿಲ್ಲ. ನಾಮಪತ್ರದ ಜತೆಗೆ ಈ ಬಾರಿ ಅಭ್ಯರ್ಥಿ ಹಿಂದೆ ಬಳಸಿದ್ದ ಸರ್ಕಾರಿ ಸೌಲಭ್ಯಗಳ ಮೇಲಿನ ಬಾಕಿ ಇರಿಸಿಕೊಂಡಿಲ್ಲ ಎಂಬ ದೃಢೀಕರಣ ನೀಡಬೇಕಾಗುತ್ತದೆ. ನೀತಿ ಸಂಹಿತೆ ಪಾಲನೆಯ ಮೇಲೆ ಕಣ್ಗಾವಲು ಇರಿಸಲು ಕ್ಷೇತ್ರದಲ್ಲಿ ಮೂರು ಸಂಚಾರಿ ದಳಗಳು ಕಾರ್ಯನಿರ್ವಹಿಸುತ್ತಿವೆ.

ಪ್ರತಿ ದಳವೂ ಮೂರು ತಂಡ ಹೊಂದಿದ್ದು ಸರದಿಯಲ್ಲಿ ದಿನದ 24 ಗಂಟೆ ಕೆಲಸ ಮಾಡುತ್ತಿವೆ. ಕ್ಷೇತ್ರದ ಗಡಿ ಪ್ರದೇಶವಾದ ಶಿರೂರು, ಹೊಸಂಗಡಿ, ಕೊಲ್ಲೂರಿನಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಎರಡು ಕಡೆ ದಾಖಲೆ ಇಲ್ಲದೆ ಒಯ್ಯುತ್ತಿದ್ದ ರೂ 50 ಸಾವಿರ ಮೀರಿದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಗಂಗೊಳ್ಳಿಯಲ್ಲಿ ವಾಟ್ಸ್‌ಅಪ್‌ನಲ್ಲಿ ಪ್ರಕಟಿಸಿದ ಆಕ್ಷೇಪಾರ್ಹ ಬರಹದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು. ಚುನಾವಣೆಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಶಾಂತಿಯುತವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.