ADVERTISEMENT

ಮಂಗಳೂರು: ವಾಯುಪಡೆಗೆ ಯುವಪಡೆ- ಬೈಕ್ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 8:10 IST
Last Updated 23 ಸೆಪ್ಟೆಂಬರ್ 2011, 8:10 IST

ಮಂಗಳೂರು: ಭಾರತೀಯ ವಾಯುಪಡೆಗೆ ಯುವಜನತೆಯನ್ನು ಆಕರ್ಷಿಸುವ ಸಲುವಾಗಿ ತಿರುವನಂತಪುರದ ಎರಡನೇ ವಾಯುಪಡೆ ನೇಮಕಾತಿ ಮಂಡಳಿ `ವಾಯುಸೇನಾ ದಕ್ಷಿಣ ಪರಿಕ್ರಮ~ ಹೆಸರಿನಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳನ್ನು ಸಂದರ್ಶಿಸುವ ಬೈಕ್ ರ‌್ಯಾಲಿ ಹಮ್ಮಿಕೊಂಡಿದ್ದು, ಗುರುವಾರ ಸಂಜೆ ಈ ರ‌್ಯಾಲಿ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿತು.

ಸೇಂಟ್ ಅಲೋಷಿಯಸ್ ಕಾಲೇಜಿಗೆ ಸಂಜೆ 4.30ರ ಸುಮಾರಿಗೆ ಆಗಮಿಸಿದ ಗ್ರೂಪ್ ಕಮಾಂಡರ್ ಐ.ವಿ.ಆರ್.ರಾವ್ ನೇತೃತ್ವದ 16 ಮಂದಿ ವಾಯುಪಡೆ ಯೋಧರು ವಿದ್ಯಾರ್ಥಿಗಳಿಗೆ ವಾಯಪಡೆಯ ಮಹತ್ವ, ಉದ್ಯೋಗ ಅವಕಾಶಗಳು, ನೇಮಕಾತಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

16 ದಿನಗಳ ಈ ರ‌್ಯಾಲಿ ಬುಧವಾರ ಮೈಸೂರಿನಿಂದ ಆರಂಭವಾಗಿತ್ತು. ಒಟ್ಟು 5 ಸಾವಿರ ಕಿ.ಮೀ.ಕ್ರಮಿಸಲಿರುವ ಈ ತಂಡ ದಕ್ಷಿಣ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು ಸಂಪರ್ಕಿಸಿ ಮತ್ತೆ ಮೈಸೂರಿಗೆ ಹಿಂದಿರುಗಲಿದೆ. ಬುಧವಾರ ಸಂಜೆ ಬೆಂಗಳೂರು ತಲುಪಿದ್ದ ತಂಡ ಗುರುವಾರ ಬೆಳಿಗ್ಗೆ 6ಕ್ಕೆ ಅಲ್ಲಿಂದ ಹೊರಟಿತ್ತು. ಶುಕ್ರವಾರ ತಂಡ ಭಟ್ಕಳ, ಕಾರವಾರ ಮೂಲಕ ಗೋವಾಕ್ಕೆ ತೆರಳಲಿದೆ.

`ಯುವತಿಯರಿಗೆ ಸಹಿತ ವಾಯುಪಡೆಯಲ್ಲಿ ಆಕರ್ಷಕ ಉದ್ಯೋಗ ಅವಕಾಶ ಇದೆ. ಸಾಹಸ ಮನೋಭಾವ ಇರುವವರಿಗೆ ಇದೊಂದು ಸವಾಲಿನ ಕೆಲಸ. ದೇಶ ಸೇವೆಯ ಜತೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಇಲ್ಲಿ ಬಹಳ ಮಹತ್ವ ಇದೆ. ಪ್ರಮುಖ ನಗರಗಳಲ್ಲಿ ಕಾಲೇಜುಗಳಿಗೆ ತೆರಳಿ ಯುವಜನತೆಯಲ್ಲಿ ವಾಯಪಡೆ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ~ ಎಂದು ವಿಂಗ್ ಕಮಾಂಡರ್ ವಿನಯ್ ಪಂಥ್ರಿ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.