ADVERTISEMENT

ಮಾನವನ ಅಹಂಭಾವದಿಂದ ಪರಿಸರ ನಾಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 10:10 IST
Last Updated 14 ಸೆಪ್ಟೆಂಬರ್ 2011, 10:10 IST

ಉಡುಪಿ: ಭೂಮಿ, ನೀರು ಗಾಳಿ, ಆಹಾರ, ವಾತಾವರಣ ಸೇರಿದಂತೆ ಎಲ್ಲವೂ ಕಲುಷಿತವಾಗುತ್ತಿದ್ದು ಪರಿಸರ ನಾಶದಿಂದಾಗಿ ವಾತಾವರಣ ಹದಗೆಡುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಾ.ಎಸ್.ಆರ್.ನಾಯಕ್ ಇಲ್ಲಿ ಆತಂಕ ವ್ಯಕ್ತಪಡಿಸಿದರು.

ನಗರಸಭೆ, ಪರ್ಯಾಯ ಶೀರೂರು ಶ್ರೀಕೃಷ್ಣಮಠ, ಸ್ನೇಹ ಟ್ಯುಟೋರಿಯಲ್ ಕಾಲೇಜು, ಜೆಸಿಐ ಮಣಿಪಾಲ ಹಿಲ್‌ಸಿಟಿ, ಲಯನೆಸ್ ಮತ್ತು ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿ ಆಶ್ರಯದಲ್ಲಿ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ `ಪರಿಸರ ಸಂರಕ್ಷಣೆ~ ಮತ್ತು `ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ~ ಬೃಹತ್ ಜನಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

84 ಜೀವ ರಾಶಿಗಳಲ್ಲಿ ಮನುಷ್ಯ ಜಾತಿಯೂ ಒಂದು. ಮನುಷ್ಯ ಜಾತಿಯೊಂದನ್ನು ಬಿಟ್ಟು ಉಳಿದೆಲ್ಲವೂ ನಿಸರ್ಗಕ್ಕೆ ಬದ್ಧವಾಗಿ ಬದುಕುತ್ತಿವೆ. ಮಾನವನ ಅಹಂಭಾವ, ಜಗತ್ತಿನಲ್ಲಿ ಇರುವುದೆಲ್ಲ ತನಗೇ ಬೇಕು ಎನ್ನುವ ಕಾರಣದಿಂದಾಗಿ ಕಾಳಜಿ ಇಲ್ಲದೇ ನಿಸರ್ಗ ಹಾಳಾಗುತ್ತಿದೆ.

ದೊಡ್ಡವರ ಬಗ್ಗೆ ತಾವು ವಿಶ್ವಾಸ ಕಳೆದುಕೊಂಡಿದ್ದು ಮಕ್ಕಳ ಬಗ್ಗೆ ಹೆಚ್ಚು ನಂಬಿಕೆ ಬೆಳೆಸಿಕೊಳ್ಳುವಂತಾಗಿದೆ. ಆದರೆ ನಾವು ಮಕ್ಕಳಲ್ಲಿ ಇಂದು ಜಾತೀಯ ವಿಷಬೀಜ ಬಿತ್ತಿದ್ದೇವೆ. ಈ ನಿಸರ್ಗವನ್ನು ಪ್ರೀತಿಸುವ ಕೆಲಸ ಮಕ್ಕಳಿಂದ ಆಗಬೇಕು ಎಂದರು.

ಲಯನ್ಸ್ ಜಯಕರ ಶೆಟ್ಟಿ ಇಂದ್ರಾಳಿ, ಮಠದ ದಿವಾಣ ಲಾತವ್ಯ ಆಚಾರ್ಯ, ನಗರಸಭೆ ಅಧ್ಯಕ್ಷ  ಕಿರಣ್ ಕುಮಾರ್, ಆಯುಕ್ತ ಗೋಕುಲದಾಸ್ ನಾಯಕ್, ಲಯನ್ಸ್ ಗವರ್ನರ್ ಡಾ.ಮಧುಸೂಧನ ಹೆಗ್ಡೆ, ಗಿರಿಜಾ ಎಸ್.ಶೆಟ್ಟಿ, ರತ್ನಾಕರ ಇಂದ್ರಾಳಿ, ಎಂ.ಪಿ.ಮೋಹನ್, ಸಂಧ್ಯಾ ಮೋಹನ್, ಶಾಸಕ ರಘುಪತಿ ಭಟ್, ಮೋಹನ್ ಉಪಾಧ್ಯಾಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.