ADVERTISEMENT

ಯಕ್ಷಗಾನ ಪರಿಣಾಮಕಾರಿ ಮಾಧ್ಯಮ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:00 IST
Last Updated 16 ಅಕ್ಟೋಬರ್ 2012, 9:00 IST

ಉಡುಪಿ: `ಜನರಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸಲು ಯಕ್ಷಗಾನ ಪ್ರಮುಖ ಕಲಾ ಮಾಧ್ಯಮ~ ಎಂದು ಶೀರೂರು ತಾಲ್ಲೂಕು ಪಂಚಾಯಿತಿ ಸದಸ್ಯೆ ಸಾವಿತ್ರಿ ಎನ್. ಮೊಗೇರ ಅಭಿಪ್ರಾಯಪಟ್ಟರು.

ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ  ಮತ್ತು ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಜಂಟಿಯಾಗಿ ಅಳ್ವೆ ಗದ್ದೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿ ಯಕ್ಷ ಬಳಗದ ಜನ ಜಾಗೃತಿ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಹಳ್ಳಿಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಉತ್ತಮ ಕೆಲಸ. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲೂ ಇಂತಹ ಜಾಗೃತಿ ಕಾರ್ಯಕ್ರಮ ನಡೆಯಬೇಕು~ ಎಂದು ಅವರು ಹೇಳಿದರು.
ಯಕ್ಷ ಬಳಗದ ಮುಖ್ಯಸ್ಥ ಶೇಷಗಿರಿ ಮಾತನಾಡಿ, ಯಕ್ಷಗಾನ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಸಮಾಜವನ್ನು ಎಚ್ಚರಿಸುವ, ಶಿಕ್ಷಣ ನೀಡುವ ಕೆಲಸವನ್ನು ಶತಮಾನಗಳಿಂದ ಮಾಡುತ್ತಿದೆ.

ನಮ್ಮ ಸಂಸ್ಥೆ ಕಳೆದ ಇಪ್ಪತ್ತು ವರ್ಷಗಳಿಂದ ಯಕ್ಷಗಾನ ಚಟುವಟಿಕೆಯಲ್ಲಿ ತೊಡಗಿದೆ. ರಾಜ್ಯದಾದ್ಯಂತ ಒಂದು ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದೆ. ಉಡುಪಿಯ 30 ಹಳ್ಳಿಗಳಲ್ಲಿ ಪ್ರದರ್ಶನ ನೀಡುತ್ತಿದೆ ಎಂದರು.
ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಚ್. ಅಶೋಕ್ ಮತನಾಡಿ, ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಕುಂದಾಪುರ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದಿಂದ ಪ್ರತಿ ದಿನ ಎರಡು ಪ್ರದರ್ಶನದಂತೆ ಮೂವತ್ತು ಕಡೆ ಪ್ರದರ್ಶನ ಏರ್ಪಡಿಸಲಾಗಿದೆ.

ಯಕ್ಷಗಾನದ ಮೂಲಕ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಮ್ಮದು. ಇದರ ಉಪಯೋಗವನ್ನು ಜನ ಸಮುದಾಯ ಪಡೆದುಕೊಳ್ಳಬೇಕು ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ರಾಮ ಮೇಸ್ತ್ರಿ, ನಾಗವೇಣಿ, ಮಹಾಬಲೇಶ್ವರ ಉಪಸ್ಥಿತರಿದ್ದರು. ಪೂರ್ಣಿಮಾ ಅವರು ಸ್ವಾಗತಿಸಿದರೆ, ಶಾಂತಿ ವಂದಿಸಿದರು.

`ಸ್ವಾಸ್ಥ್ಯ ಸಂಕ್ರಾಂತಿ~ ಎಂಬ ನೂತನ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಾಯಿತು. ಶ್ರೀಕಾಂತ್ ಹೆಗಡೆ, ವೆಂಕಟ ರಮಣ ಚಂಡೆ ವಾದಕರಾಗಿ, ಶ್ರೀಕಾಂತ್ ಹೆಗಡೆ ಮೃದಂಗ ವಾದಕರಾಗಿ ಭಾಗವಹಿಸಿದ್ದರು. ವಿವೇಕ ನಾರಾಯಣ ಭಟ್, ರಾಮಮೂರ್ತಿ ಹೆಗಡೆ, ಅವಿನಾಶ್ ಹೆಗಡೆ,  ಮಂಜುನಾಥ್, ಯೋಗರಾಜ್, ಜಯೀಂದ್ರ ಪಾತ್ರವರ್ಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.