ADVERTISEMENT

ರಂಗೋಲಿ ಜಾನಪದ ಕಲೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 6:30 IST
Last Updated 18 ಏಪ್ರಿಲ್ 2012, 6:30 IST

ಉಡುಪಿ:`ಪ್ರಾಚೀನ ಕಲೆಯಾದ ರಂಗೋಲಿಯ ಇತಿಹಾಸವನ್ನು ಸಂಶೋಧಕಿ ಭಾರತಿ ಮರವಂತೆ ಅವರು ತಮ್ಮ ಸಂಶೋಧನಾ ಗ್ರಂಥದಲ್ಲಿ ಸವಿಸ್ತಾರವಾಗಿ ದಾಖಲಿಸಿದ್ದಾರೆ~ ಎಂದು ಶಿಕ್ಷಣ ತಜ್ಞ ಪ್ರೊ. ಕೆ.ಆರ್. ಹಂದೆ ಹೇಳಿದರು.

ನಗರದ ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ಗುರುವಾರ ನಡೆದ ರಂಗೋಲಿ ಸಂಶೋಧನಾ ಗ್ರಂಥ (ಕರಾವಳಿ ಕರ್ನಾಟಕದ ರಂಗೋಲಿ ಕಲೆ) ಬಿಡುಗಡೆ ಮತ್ತು ರಂಗೋಲಿ ಕಲಾ ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಂಗೋಲಿ ಕಲೆ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಆಧುನಿಕ ಕಾಲದಲ್ಲಿ ರಂಗೋಲಿ ಕಲೆ ಹೇಗಿರುತ್ತದೆ ಎಂಬುದನ್ನೂ ಅವರು ಪುಸ್ತಕದಲ್ಲಿ ಹೇಳಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ರಂಗೋಲಿ ಕಲೆ ಹೇಗೆ ಉಳಿದು ಬೆಳೆದು ಬಂದಿದೆ ಎಂಬ ಅಂಶಗಳನ್ನು ಅವರು ದಾಖಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ರಂಗೋಲಿ ಒಂದು ಜಾನಪದ ಮತ್ತು ಸಾಂಸ್ಕೃತಿಕ ಕಲೆ. ಈ ಗ್ರಂಥ ಕೇವಲ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿರಬಾರದು ಎಂಬ ಕಾರಣಕ್ಕೆ ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿರ್ಧರಿಸಿದೆ. ಪುಸ್ತಕ ಪ್ರಕಟಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕಾ.ತಾ. ಚಿಕ್ಕಣ್ಣ ಅವರು ತುಂಬಾ ಸಹಾಯ ಮಾಡಿದರು.

ಪುಸ್ತಕವನ್ನು ರೂಪದಲ್ಲಿ ಪ್ರಕಟಿಸಿ ಅದನ್ನು ಓದುಗರಿಗೆ ತಲುಪಿಸುತ್ತಿರುವುದು ಬಹಳ ಸಂತೋಷದ ಸಂಗತಿ~ ಎಂದು ಭಾರತಿ ಮರವಂತೆ ಹೇಳಿದರು.

ರಂಗೋಲಿ ಪುರಾತನ ಕಲೆಯಾಗಿದೆ. ವಚನಕಾರರ ಕಾಲದಲ್ಲಿ ರಂಗೋಲಿ ಕಲೆ ಇತ್ತು ಎಂಬುದಕ್ಕೆ ವಚನಗಳಲ್ಲಿ ರಂಗೋಲಿಯ ಉಲ್ಲೇಖ ಇರುವುದೇ ಸಾಕ್ಷಿಯಾಗಿದೆ.  ರಂಗೋಲಿ ಕಲೆಯ ಬಗ್ಗೆ ಸಂಶೋಧನೆ ಮಾಡಲು ಬಹಳಷ್ಟು ಅವಕಾಶವಿದೆ. ಕನಿಷ್ಠ ಹತ್ತು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಬಹುದು ಎಂದು ಅವರು ಹೇಳಿದರು.

ಭಾರತಿ ಮರವಂತೆ ಅವರು ರಂಗೋಲಿ ಕಲೆಯ ಬಗ್ಗೆ ಸಂಶೋಧನೆ ಮಾಡಿ. ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಕಲಾವಿದರ ಕಲ್ಯಾಣ ವೇದಿಕೆಯ ಅಧ್ಯಕ್ಷ ಕೆಂಚನೂರು ಶಂಕರ್ ಪ್ರಶಂಸಿಸಿದರು.

ಜಾನಪದ ತಜ್ಞೆ ಶಾಂತಿ ನಾಯಕ್ ಅವರು ಸಂಶೋಧನಾ ಗ್ರಂಥ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ರಂಗೋಲಿ ಕಲಾ ಪರಿಷತ್ತನ್ನೂ ಉದ್ಘಾಟಿಸಲಾಯಿತು.  ಉಡುಪಿ ವಾಸುದೇವ ಭಟ್ ಅವರು ನಡೆಸಿಕೊಟ್ಟ ವಾದಿರಾಜರ ಕೀರ್ತನೆ ಕಾರ್ಯಕ್ರಮ ಮನಸೂರೆಗೊಂಡಿತು.

ವಾರ್ತಾಧಿಕಾರಿ ಜುಂಜಣ್ಣ, ಶಾಲಿನಿ ಶೆಟ್ಟಿ ಕೆಂಚನೂರು, ಡಾ. ಎಚ್.ಶಾಂತಾರಾಮ್, ರಬೀಂದ್ರ ನಾಯಕ್, ಡಾ. ಕನರಾಡಿ ವಾದಿರಾಜ ಭಟ್, ಲಕ್ಷ್ಮಿ ಬಾಯಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.