ADVERTISEMENT

ವಿದ್ಯಾರ್ಥಿ ಸಂಸತ್‌ಗೆ ಮಾದರಿ ಮತದಾನ

ಕೊಕ್ಕರ್ಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 8:53 IST
Last Updated 6 ಜೂನ್ 2018, 8:53 IST
ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದ.
ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದ.   

ಕೊಕ್ಕರ್ಣೆ(ಬ್ರಹ್ಮಾವರ): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾಡಳಿತ, ಸ್ವೀಪ್ ಮತ್ತಿತರ ಸಂಘಟನೆಗಳು ಮತದಾನದ ಜಾಗೃತಿಯ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದ ಕಾರಣದಿಂದ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಮತದಾನವಾಯಿತು. ಶೇಕಡಾವಾರು ಏರಿಕೆಯಲ್ಲಿ ಇನ್ನೂ ಪ್ರಗತಿ ಕಾಣಬೇಕು ಮತ್ತು ಪ್ರತಿಯೊಬ್ಬರಲ್ಲೂ ಮತದಾನದ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಕೊಕ್ಕರ್ಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿ ಸಂಸತ್‌ಗೆ ಮಾದರಿ ಮತದಾನ ನಡೆಯಿತು.

ಹತ್ತಿರದಲ್ಲೇ ಗ್ರಾಮ ಪಂಚಾಯಿತಿ ಮರುಚುನಾವಣೆ ಇರುವುದರಿಂದ ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಮತದಾನದ ಜಾಗೃತಿ ಮೂಡಿಸಲು ಸಾರ್ವತ್ರಿಕ ಚುನಾವಣಾ ಮಾದರಿಯಲ್ಲೇ ಮತದಾನ ನಡೆಸಲಾಯಿತು. ಮತಪತ್ರಗಳನ್ನು ಮುದ್ರಿಸಿ ಹಾಜರಾತಿಗೆ ಅನುಗುಣವಾಗಿ ಮತದಾರರ ಗುರುತು ಮಾಡಿ, ಶಾಯಿ ಹಾಕಿ ಮತಪತ್ರಗಳನ್ನು ನೀಡಲಾಯಿತು. ವಿದ್ಯಾರ್ಥಿ ಮತದಾರರು ಅಂಕಣದ ಒಳಗೆ ಮತ ಚಲಾಯಿಸಿ ಮತಪೆಟ್ಟಿಗೆಯಲ್ಲಿ ಹಾಕಿ ಸಂಭ್ರಮಿಸಿದರು.

ಮೂರು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ಆರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಏಳನೇ ಕ್ರಮಸಂಖ್ಯೆಯಲ್ಲಿ ನೋಟಾ ಸೇರಿಸಲಾಗಿತ್ತು. ಮೂರು ಸುತ್ತಿನ ಮತ ಎಣಿಕೆಯ ನಂತರ ಹತ್ತನೇ ತರಗತಿಯ ಆಂಗ್ಲಮಾಧ್ಯಮ ವಿಭಾಗದ ವಿದ್ಯಾರ್ಥಿ ನಾಗಸೂದನ್ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ. ಎಂಟನೇ ತರಗತಿಯಿಂದ 76, 9ನೇ ತರಗತಿಯ 62 ಮತ್ತು 10ನೇ ತರಗತಿಯಿಂದ 76 ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಅಧ್ಯಕ್ಷಾಧಿಕಾರಿಯಾಗಿ ಮುಖ್ಯೋಪಾಧ್ಯಾಯಿನಿ ಜಯಶ್ರೀ ಜಿ., ಮತಗಟ್ಟೆ ಅಧಿಕಾರಿಗಳಾಗಿ ಸಹಶಿಕ್ಷಕರಾದ ಲತಾ ಜಿ. ನಾಯಕ್, ಪ್ರತಿಮಾ ವಿ.ಕೆ., ಶ್ರೀಲತಾ ಸೋಮಯಾಜಿ ಸಹಕರಿಸಿದರು. ಕಂಪ್ಯೂಟರ್ ಶಿಕ್ಷಕಿ ಅಖಿಲಾ ಡಿ.ಶೆಟ್ಟಿ ಅಂಕಿ ಅಂಶಗಳನ್ನು ದಾಖಲಿಸಿದರು. ಸೂಕ್ಷ್ಮ ವೀಕ್ಷಕರಾಗಿ ರಾಘವೇಂದ್ರ ಚಾತ್ರಮಕ್ಕಿ, ನೋಡಲ್ ಅಧಿಕಾರಿಯಾಗಿ ನಾಗರಾಜ್ ಕೆ.ಎ., ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಗೆ ಮತಗಟ್ಟೆಯ ಸಂಪೂರ್ಣ ಮಾಹಿತಿಗಳನ್ನು ನೀಡಿದರು.

ಒಟ್ಟಾರೆ ಮತದಾನದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲಿಯೇ ತಿಳಿಸಿಕೊಡುವ ಪ್ರಯತ್ನ ಮಾಡಿದ ಶಾಲೆಯ ಶಿಕ್ಷಕರ ವೃಂದದ ಈ ಕಾರ್ಯಕ್ಕೆ ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

**
ಮಕ್ಕಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅವರ ಪೋಷಕರು ಎಲ್ಲ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಮಾದರಿ ಮತದಾನ ನಡೆಸಲಾಯಿತು
– ನಾಗರಾಜ್ ಕೆ.ಎ., ಅಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.