ADVERTISEMENT

ಶಾಂತಿಯುತ ಮತದಾನಕ್ಕೆ ಸಿದ್ಧತೆ ಪೂರ್ಣ

2,500 ಪೊಲೀಸ್ ಸಿಬ್ಬಂದಿ ನಿಯೋಜನೆ: ಮತದಾನ ಇಂದು

​ಪ್ರಜಾವಾಣಿ ವಾರ್ತೆ
Published 12 ಮೇ 2018, 6:46 IST
Last Updated 12 ಮೇ 2018, 6:46 IST
ಉಡುಪಿಯ ಸೇಂಟ್ ಸಿಸಿಲಿಸ್ ಮಸ್ಟರಿಂಗ್ ಕೇಂದ್ರದಿಂದ ಮತ ಯಂತ್ರದೊಂದಿಗೆ ನಿಯೋಜಿತ ಮತಗಟ್ಟೆಗೆ ತೆರಳಿದ ಚುನಾವಣಾ ಸಿಬ್ಬಂದಿ.
ಉಡುಪಿಯ ಸೇಂಟ್ ಸಿಸಿಲಿಸ್ ಮಸ್ಟರಿಂಗ್ ಕೇಂದ್ರದಿಂದ ಮತ ಯಂತ್ರದೊಂದಿಗೆ ನಿಯೋಜಿತ ಮತಗಟ್ಟೆಗೆ ತೆರಳಿದ ಚುನಾವಣಾ ಸಿಬ್ಬಂದಿ.   

ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯ ಲಿದ್ದು, ಸಕಲ ಸಿದ್ಧತೆ ಪೂರ್ಣಗೊಂಡಿದೆ. ಮುಕ್ತ ಹಾಗೂ ನಿರ್ಭೀತ ಮತದಾನಕ್ಕೆ ಅನುವು ಮಾಡಿಕೊಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 9,93,415 ಮತದಾರರಿದ್ದಾರೆ. 1,103ಮತಗಟ್ಟೆ ತೆರೆಯಲಾಗಿದೆ. ಚುನಾವಣಾ ಪ್ರಕ್ರಿಯೆ ಗಾಗಿ ಈಗಾಗಲೇ ತರಬೇತಿ ಪೂರೈಸಿರುವ 6,354 ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ ವಹಿಸಲಾಗಿದೆ. ಅಧಿಕ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಚುನಾಣಾ ಪ್ರಕ್ರಿಯೆಯನ್ನು ಪಾರದರ್ಶ ನವಾಗಿಸಲು ನಿಟ್ಟಿನಲ್ಲಿ ಆಯ್ದ 132 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ.

ಮಸ್ಟರಿಂಗ್ ಕೇಂದ್ರವಾದ ಉಡುಪಿ ನಗರದ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರ, ವಿವಿ ಪ್ಯಾಟ್, ನಿಯಂತ್ರ ಘಟಕವನ್ನು ನೀಡಿ ನಿಯೋಜಿತ ಮತ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಇದಕ್ಕಾಗಿ 303 ಮಾರ್ಗಗಳನ್ನು ಗುರುತಿಸಲಾಗಿತ್ತು. ಅಷ್ಟೇ ಸಂಖ್ಯೆಯ ವಾಹನ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಈ ಕೇಂದ್ರದ ಸುತ್ತ ಸಹ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು. ಮತಗಟ್ಟೆಗಳಲ್ಲಿ ಸಹ ಉಳಿದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಲಿದೆ.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಮೇ 12ರ ಮಧ್ಯರಾತ್ರಿ 12 ಗಂಟೆಯ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. 15ರಂದು ಮತ ಎಣಿಕ ನಡೆಯುವುದರಿಂದ 14ರ ಮಧ್ಯರಾತ್ರಿ 12ರಿಂದ 15ರ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮೇ10ರ ಸಂಜೆ 6ರಿಂದ 13ರ ಸಂಜೆ 6ರ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದ್ದರಿಂದ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಸಭೆ ಹಾಗೂ ಮೆರವಣಿಗೆಯನ್ನು ಸಹ ನಿಷೇಧಿಸಲಾಗಿದೆ.

ಯಾವುದೇ ಅಂಜಿಕೆ ಇಲ್ಲದೆ ಎಲ್ಲ ಮತದಾರರು ಬಂದು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಶಿವಾನಂದ ಕಾಪಶಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ ನಿಂಬರಗಿ ಮನವಿ ಮಾಡಿದ್ದಾರೆ.

ಮಹಿಳೆಯರಿಗಾಗಿ 10 ಪಿಂಕ್ ಮತಗಟ್ಟೆ ಆರಂಭ

ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಒಟ್ಟು 10 ‘ಪಿಂಕ್’ ಮತಗಟ್ಟೆ ತೆರೆಯಲಾಗಿದೆ. ಈ ಕೇಂದ್ರಕ್ಕೆ ಮಹಿಳಾ ಸಿಬ್ಬಂದಿ ನಿಯೋಜಿಸಲಾಗಿದೆ. ಮಹಿಳಾ ಮತದಾರರನ್ನು ಆಕರ್ಷಿಸಲು ಹಾಗೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಚುನಾವಣೆಯ ವಿಶೇಷತೆಗಳಲ್ಲಿ ಇದು ಸಹ ಒಂದು.

ಅಂಗವಿಕಲರು ತೊಂದರೆ ಇಲ್ಲದೆ ಮತದಾನ ಮಾಡಲು ಸಹ ವ್ಯವಸ್ಥೆ ಮಾಡಲಾಗಿದೆ. ಒಟ್ಟು 55 ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಹೋಗಿ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ದೃಷ್ಟಿ ದೋಷ ಇರುವವರಿಗೆ ಬೂತಗನ್ನಡಿ ನೀಡಲಾಗುತ್ತದೆ.

**
ಈ ಬಾರಿ ಆ್ಯಪ್ ಸಹ ಸಿದ್ಧಪಡಿಸಲಾಗಿದೆ. ಮಾಹಿತಿ ಅದರಲ್ಲೂ ವಿಶೇಷವಾಗಿ, ಸರದಿ ಸಾಲಿನ ಮಾಹಿತಿಯನ್ನು ಪ್ರತಿ ಹತ್ತು ನಿಮಿಷಕ್ಕೊಮ್ಮೆ ನೀಡಲಾಗುತ್ತದೆ
–  ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.