ADVERTISEMENT

ಶಿಬಿರದ ಅನುಭವ ಜೀವನದ ಆಸ್ತಿ-: ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:24 IST
Last Updated 8 ಜನವರಿ 2014, 6:24 IST

ಬ್ರಹ್ಮಾವರ:ಶಿಬಿರದ ಅನುಭವಗಳು ಜೀವನದ ಆಸ್ತಿಯಾಗಿರುತ್ತವೆ. ಮನುಷ್ಯ ಪರಿಪೂರ್ಣನಾಗಲು, ಅರ್ಥ­ವಾಗದ ವಿಚಾರಗಳನ್ನು ಮತ್ತು ವಿಮರ್ಶೆಗೆ ನಿಲುಕದ ಅನೇಕ ವಿಷಯ­ಗಳನ್ನು, ಅನುಭವಗಳನ್ನು ಪಡೆಯಲು ಸಹಾಯವಾಗುತ್ತವೆ. ಎನ್.ಎಸ್.­ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಬಯಲು ವಿಶ್ವವಿದ್ಯಾನಿಲಯ ಇದ್ದಂತೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಚೇರ್ಕಾಡಿ ಶಾರದಾ ಪ್ರೌಢ ಶಾಲೆ­ಯಲ್ಲಿ ಇತ್ತೀಚೆಗೆ ನಡೆದ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ­ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗ­ವಹಿಸಿ ಆಶಯ ಭಾಷಣ ಮಾಡಿದರು.

ಚೇರ್ಕಾಡಿಯ ಕೆನರಾ ಎಜ್ಯುಕೇಶನ್ ಆಂಡ್ ಕಲ್ಚರಲ್ ಸೊಸೈಟಿಯ ಅಧ್ಯಕ್ಷ ಬಿ.ರಾಜೀವ ಆಳ್ವ ವಾರ್ಷಿಕ  ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾ­ಡುತ್ತಾ ಜಂಜಾಟದ ಬದುಕಿನಲ್ಲಿ ಜೀವನ ನಡೆಸುವುದು ಬರೀ ಪಠ್ಯ ಪುಸ್ತಕದ ಅಧ್ಯಯನದಿಂದ ಸಾಧ್ಯವಿಲ್ಲ. ಇಂತಹ ಶಿಬಿರಗಳು ಬದುಕಲು ಕಲಿಸುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.­ಮಾಧವಿ ಎಸ್. ಭಂಡಾರಿ ಮಾತನಾಡಿ ಇದು ಶ್ರಮ ಸಂಸ್ಕೃತಿಯನ್ನು ಉತ್ತಮ­ಪಡಿಸುವ ಒಂದು ಯೋಜನೆ. ಪುಸ್ತಕ ಸಂಸ್ಕೃತಿ ಬೌದ್ಧಿಕ ಸಂಸ್ಕೃತಿಯಾದರೆ ಎನ್.ಎಸ್.ಎಸ್. ಭೌತಿಕ ಸಂಸ್ಕೃತಿಯಾಗಿದೆ ಎಂದು ಹೇಳಿದರು.

ಕೆನರಾ ಎಜ್ಯುಕೇಶನ್ ಆಂಡ್ ಕಲ್ಚರಲ್ ಸೊಸೈಟಿಯ ಉಪಾಧ್ಯಕ್ಷ ನ್ಯಾಯವಾದಿ ವಿಜಯ ಹೆಗ್ಡೆ, ಶಾರದಾ ಪ್ರೌಢ ಶಾಲೆಯ ಮುಖ್ಯೋಪಾ­ಧ್ಯಾಯ ಬಿ.ನರಸಿಂಹ ಬಾಯರಿ,  ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ ಕುಮಾರ್, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರೂರು ತಿಮ್ಮಪ್ಪ ಶೆಟ್ಟಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಪೂಜಾರಿ, ಶಿಬಿರದ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.ಯೋಜನಾಧಿಕಾರಿ ರಮಾನಂದ ರಾವ್ ಸ್ವಾಗತಿಸಿದರು. ಸಹಶಿಬಿರಾಧಿ­ಕಾರಿ  ರಾಮಕೃಷ್ಣ ಉಡುಪ ವಂದಿಸಿ­ದರು. ಮಹಿಳಾ ಶಿಬಿರಾಧಿಕಾರಿ  ಮಲ್ಲಿಕಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.