ADVERTISEMENT

ಹಾನಿ: ಮಾನವೀಯವಾಗಿ ಸ್ಪಂದಿಸಿ

ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಅಧಿಕಾರಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 6:31 IST
Last Updated 30 ಜುಲೈ 2015, 6:31 IST

ಉಡುಪಿ: ಮಳೆ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪಗಳಿಂದ ಹಾನಿ ಸಂಭವಿಸಿದಾಗ ಪ್ರತಿಯೊಂದನ್ನು ತಾಂತ್ರಿಕ ನೆಲೆಯಲ್ಲಿಯೇ ಪರಿಗಣಿಸದೆ ಮಾನವೀಯತೆಯಿಂದಲೂ ನೋಡಿ ಪರಿಹಾರ ನೀಡಿ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಮಳೆಯಿಂದಾಗಿ ಮಣ್ಣಿನ ಗೋಡೆ ಮನೆಗಳಿಗೆ ಭಾಗಶಃ ಹಾನಿ ಯಾಗಿದ್ದರೆ ಅದನ್ನು ಸಂಪೂರ್ಣ ಹಾನಿ ಎಂದೇ ಪರಿಗಣಿಸಿ ಪರಿಹಾರ ನೀಡಿ. ರೈತರು ಮತ್ತು ಬಡ ಜನರ ಹಿತ ಕಾಯಲು ಆದ್ಯತೆ ನೀಡಿ. ಪ್ರಾಕೃತಿಕ ವಿಕೋಪಕ್ಕೆ ಸಾಕಷ್ಟು ಅನುದಾನ ಲಭ್ಯವಿದೆ. ಕಡಲ್ಕೊರೆತ, ಕೃಷಿ ಹಾನಿ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಕರಾವಳಿ ಭಾಗಕ್ಕೆ ವಿಶೇಷ ಅನುದಾನ ನೀಡಿ ಎಂದು ಈ ಭಾಗದ ಸಚಿವರ ನಿಯೋಗ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಿದೆ ಎಂದು ಹೇಳಿದರು. 

ಮೆಸ್ಕಾಂ ಅಧಿಕಾರಿಗಳ ಪ್ರತ್ಯೇಕ ಸಭೆಯನ್ನು ಕರೆದು ಮಾಹಿತಿ ಪಡೆಯಿರಿ. ಸಮಗ್ರ ಹಾನಿಯ ಬಗ್ಗೆ ಆದಷ್ಟು ಬೇಗ ವರದಿ ನೀಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಕಾರ್ಯಪಡೆ ಹಾಗೂ ತಹಶೀಲ್ದಾರ್‌ಗಳ ಮೂಲಕ ಕೈಗೊಂಡಿರುವ ಪರಿಹಾರ ಕಾಮಗಾರಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ ಕೃಷಿ ಬೆಳೆ ಹಾನಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣ ಗೊಂಡ ನಂತರ ಪರಿಹಾರ ನೀಡಲಾಗು ವುದು. ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಕಟ್ಟಡವನ್ನು ರಿಪೇರಿ ಮಾಡಲಾಗುವುದು. ಮಳೆಯಿಂದಾಗಿ ಮೃತಪಟ್ಟಿರುವ 4 ಮಂದಿಗೆ ಪರಿ ಹಾರ ನೀಡಲಾಗಿದೆ. ಒಟ್ಟು 20.11 ಎಕರೆಗೆ ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಕುಂದಾಪುರ ಉಪ ವಿಭಾಗಾಧಿಕಾರಿ ಚಾರುಲತಾ ಸೋಮಲ್‌ ಇದ್ದರು.

ಪ್ರಾಕೃತಿಕ ವಿಕೋಪ ಹಾನಿಗೆ ಶೀಘ್ರವಾಗಿ ಪರಿಹಾರ ನೀಡುವ ಉದ್ದೇಶದಿಂದ ಮೂವರು ತಹಶೀಲ್ದಾರ್‌ಗಳ ಅಧಿಕಾರ ವಿಕೇಂದ್ರೀಕರಣ ಮಾಡಿ ಮುಂಗಡ ಹಣವನ್ನೂ ನೀಡಲಾಗಿದೆ.   -ಡಾ.ಆರ್. ವಿಶಾಲ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.