ADVERTISEMENT

ಹುಟ್ಟೂರಿನಲ್ಲಿ ಪೂಜಾರಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 10:40 IST
Last Updated 19 ಜುಲೈ 2012, 10:40 IST

ಕೋಟ(ಬ್ರಹ್ಮಾವರ): ಸಚಿವ ಸ್ಥಾನ ಪಡೆದು ಮೊತ್ತ ಮೊದಲ ಬಾರಿಗೆ ಬುಧವಾರ ಹುಟ್ಟೂರಿಗೆ ಬಂದ ರಾಜ್ಯದ ಒಳನಾಡು, ಬಂದರು ಸಾರಿಗೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿ ಬಳಗ ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸ್ವಾಗತಿಸಿದರು.

ಸಚಿವರು ಮೊದಲು ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಹುಟ್ಟೂರು ಕೋಟಕ್ಕೆ ಬಂದ ಸಚಿವರನ್ನು ಮುಸ್ಲಿಮರು ಕೋಟ ಜುಮ್ಮಾ ಮಸೀದಿಯ ಬಳಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಇಬ್ರಾಹಿಂ ಸಾಹೇಬರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.

ನಂತರ ಮಸೀದಿಗೆ ಭೇಟಿ ನೀಡಿದ ಸಚಿವರು ನೂತನ ಮಸೀದಿಯ ಕಟ್ಟಡ ಕಾಮಗಾರಿಯನ್ನು ಪರೀಶೀಲಿಸಿದರು. ಕೋಟದ ಕಾಶಿ ಮಠಕ್ಕೆ ಭೇಟಿ ನೀಡಿದ ಅವರು ಬಳಿಕ ಕೋಟ ಬಸ್ ನಿಲ್ದಾಣದ ಬಳಿಯಿಂದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದವರೆಗೆ ಪಾದಯಾತ್ರೆಯಲ್ಲಿ ತೆರಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.  

 ಕಾರಂತ ಕಲಾಭವನಕ್ಕೆ ಭೇಟಿ: ಕೋಟತಟ್ಟು ಗ್ರಾಮ ಪಂಚಾಯಿ ತಿಯ ಕಾರಂತ ಕಲಾಭವನದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಿಗೆ ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು `ಸಾಮಾನ್ಯ ನಾಗರಿಕನಾಗಿ ಬದುಕಿನ ಹೆಚ್ಚಿನ ಸಮಯವನ್ನು ಕಳೆದು ಈ ನೆಲಕ್ಕೆ ಬರಲು ತಮಗೆ ಅತೀವ ಸಂತಸವಾಗುತ್ತಿದೆ.

ಪಕ್ಷದ ಹಿರಿಯರ ಅದೇಶ ಮತ್ತು ಆಶೀರ್ವಾದದೊಂದಿಗೆ ಸಚಿವ ಸ್ಥಾನದ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಗ್ರಾಮ ಪಂಚಾಯಿತಿ ಯಿಂದ  ಹಿಡಿದು ತಾಲ್ಲೂಕು, ಜಿಲ್ಲಾ ಮತ್ತು ವಿಧಾನ ಪರಿಷತ್ ಸದಸ್ಯನಾಗಿ ನನ್ನ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದು, ಎಂದೂ ಸಚಿವನಾಗುತ್ತೇನೆ ಎಂಬ ಕನಸನ್ನು ಕಂಡಿಲ್ಲ. ರಾಜ್ಯದ ಇತಿಹಾಸದಲ್ಲಿ ಹಣ ಬಲವಿಲ್ಲದೆ ಕೇವಲ ರೂ. 5ಸಾವಿರ ಠೇವಣಿ ಕಟ್ಟಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ನಾನು ಆ ಸಂದರ್ಭದಲ್ಲಿ ಅವಿರೋಧ ವಾಗಿ ಆಯ್ಕೆಯಾಗಿ ಚುನಾವಣೆಗಾಗಿ ಒಂದು ರೂಪಾಯಿ ಸಹ ಖರ್ಚು ಮಾಡದೇ ಗೆದ್ದು ಬಂದಿದ್ದು, ತನಗೆ ಹಣ ಮಾಡುವ ಆಸೆಯಾಗಲೀ, ಅಪೇಕ್ಷೆ ಆಗಲೀ ಇಲ್ಲ~ ಎಂದು ತಿಳಿಸಿದರು.

ಆಚಾರ್ಯರ ಕಾಯ್ದೆ ಜಾರಿ: ಡಾ.ವಿ.ಎಸ್ ಆಚಾರ್ಯರು ಮಂಡಿಸಿದ ಧಾರ್ಮಿಕ ದತ್ತಿ ಕಾಯಿದೆಯನ್ನು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಹಾಗೂ ದೇವಸ್ಥಾನಗಳ ಶುಚಿತ್ವಕ್ಕೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.

ನೂತನ ಸಚಿವರನ್ನು ಕೋಟದ ಉದ್ಯಮಿ ಆನಂದ ಸಿ ಕುಂದರ್, ಶ್ರೀಧರ ಹಂದೆ, ಡಾ.ರಾಘವೇಂದ್ರ ಉರಾಳ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಲಿನಿ ಮಲ್ಯ ಮತ್ತಿತರರು ಅಭಿನಂದಿಸಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ತಿಂಗಳಾಯ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ರಾಜಾರಾಂ, ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.