ADVERTISEMENT

‘ದೇಶಕ್ಕಾಗಿ ಬದುಕುವ ಅಭಿಮಾನ ಬೆಳೆಸಿಕೊಳ್ಳಿ’

ಹಟ್ಟಿಯಂಗಡಿ: ‘ಪಾಂಚಜನ್ಯ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 10:49 IST
Last Updated 4 ಜನವರಿ 2014, 10:49 IST

ಕುಂದಾಪುರ: ‘ಧರ್ಮ ಸಂಸ್ಕೃತಿಗಳ ಆಸಕ್ತಿಯ ಜೊತೆಗೆ ನಮ್ಮ ತಾಯಿ ನಾಡಿನ ಬಗ್ಗೆ ನಿಜವಾದ ಕಾಳಜಿಯನ್ನು ಇರಿಸಿಕೊಳ್ಳುವುದರಿಂದ ಪವಿತ್ರವಾದ ಭಾರತದ ಮಣ್ಣಲ್ಲಿ ಹುಟ್ಟಿದ್ದಕ್ಕೆ ನಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಹಾಗೂ ಕುಟುಂಬ ಪ್ರಬೋಧನ್ ಅಖಿಲಭಾರತದ ಸಹ ಸಂಯೋಜಕ ಸು.ರಾಮಣ್ಣ ಅವರು ಹೇಳಿದರು.

ಇಲ್ಲಿಗೆ ಸಮೀಪದ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಂಗಳವಾರ ನಡೆದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಲೇಖಕ ಮಂಗೇಶ ಶೆಣೈ ಅವರ ಕೃತಿ ‘ಪಾಂಚಜನ್ಯ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಭಾರತೀಯರಾದ ನಾವು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಬೇಕೆನ್ನುವ ಕನಸುಕಾಣಬೇಕು. ಪ್ರತಿಯೊಬ್ಬ ದೇಶವಾಸಿ­ಯಲ್ಲಿಯೂ ದೆೇಶಭಕ್ತಿಯ ರಕ್ತಹರಿಯಬೇಕು. ದೇಶಕ್ಕಾಗಿ ನಾವು ಬದುಕಬೇಕು ಎನ್ನುವ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಭವ್ಯ ಭಾರತದ ಪೂರ್ಣ ಸಾರವನ್ನು ಹೊಂದಿರುವ ವಂದೇ ಮಾತರಂ ಗೀತೆಯನ್ನು ಪ್ರತಿ ಬಾರಿ ಉಚ್ಚರಿಸು­ವಾಗಲೂ ಅದರ ಅರ್ಥಗಳನ್ನು ಗ್ರಹಿಸಿಕೊಳ್ಳಬೇಕು. ಗೀತೆಗಳಲ್ಲಿ ಅಡಕವಾಗಿರುವ ಪರಿಶ್ರಮದಿಂದ ಸಾರ್ಥಕತೆ ಸಾಧ್ಯ ಎನ್ನುವ ಅಂಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು’ ಎಂದು ವಿಶ್ಲೇಷಣೆ ಮಾಡಿದರು.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಎಚ್‌.ರಾಮಚಂದ್ರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತ ವಿಕಾಸ ಪರಿಷದ್ ಪರಶುರಾಮ ಶಾಖೆ ಕೋಟೇಶ್ವರದ ಗೌರವಾಧ್ಯಕ್ಷ ಬಿ.ಎಲ್. ಉಪಾಧ್ಯಾಯ. ಲೇಖಕ ಹಾಗೂ ಸಂಗೀತಕಾರ ಮಂಗೇಶ ಶೆಣೈ ಬೈಂದೂರು, ಭಾರತ ವಿಕಾಸ ಪರಿಷದ್ ಪರಶುರಾಮ ಶಾಖೆ ಕೋಟೇಶ್ವರದ ಅಧ್ಯಕ್ಷ ಕೆ. ಸುಖೇಶ್ ಶೇಟ್, ಉದ್ಯಮಿ ಚಂದ್ರಮೋಹನ ಧನ್ಯ, ಸಿದ್ಧಿವಿನಾಯಕ ವಸತಿಶಾಲೆಯ ಪ್ರಾಂಶುಪಾಲ ಶರಣ ಕುಮಾರ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು. ಶ್ರೀಮಧು ಸ್ವಾಗತಿಸಿದರು., ಶಿಕ್ಷಕ ರಾಮ ದೇವಾಡಿಗ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.