ADVERTISEMENT

‘ವಿಷಯಒಪ್ಪುವ ಮೊದಲು ಅದನ್ನು ಒರೆಗೆ ಹಚ್ಚಿ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:16 IST
Last Updated 23 ಸೆಪ್ಟೆಂಬರ್ 2013, 10:16 IST

ಉಡುಪಿ: ’ಅತಿಮಾನುಷ ಶಕ್ತಿ ಇದೆ ಎಂದು ಬಿಂಬಿಸಿಕೊಳ್ಳಲು ಕೆಲವರು ಪವಾಡಗಳನ್ನು ಮಾಡುತ್ತಾರೆ. ಕ್ಯಾನ್ಸರ್‌, ಏಡ್ಸ್‌ ಕಾಯಿಲೆ ಗಳನ್ನು ಗುಣಪಡಿಸುವುದಾಗಿ ಮುಗ್ಧರನ್ನು ನಂಬಿಸುತ್ತಾರೆ. ಜನರು ಯಾವುದೇ ವಿಷಯವನ್ನು ಒಪ್ಪಿಕೊಳ್ಳುವ ಮೊದಲು ಅದನ್ನು ಒರೆಗೆ ಹಚ್ಚಿ ನೋಡಬೇಕು. ಸತ್ಯ ಇದ್ದರೆ ಮಾತ್ರ ಒಪ್ಪಿಕೊಳ್ಳಬೇಕು’ ಎಂದು ಅಖಿಲ ಭಾರತ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್‌ ಹೇಳಿದರು.

ಜಾತಿಮುಕ್ತ ವಿಚಾರ ವೇದಿಕೆ ವಿಚಾರವಾದಿ ನರೇಂದ್ರ ದಾಬೋಲ್ಕರ್‌ ಸ್ಮರಣಾರ್ಥ ನಗರದ ಟಿ.ಎ.ಪೈ. ಹಿಂದಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 'ಮೂಢ ನಂಬಿಕೆಗಳ ವಿಶ್ಲೇಷಣೆ, ಪ್ರಾತ್ಯಕ್ಷಿಕೆ ಸಂವಾದ’ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿಮಾನುಷ ಶಕ್ತಿ ಇದೆ ಎಂದು ಬಿಂಬಿಸಿಕೊಂಡ ಸತ್ಯನಾರಾಯಣ ರಾಜು ಎಂಬ ವ್ಯಕ್ತಿ (ಪುಟ್ಟಪರ್ತಿ ಸಾಯಿಬಾಬಾ) ಸಾವಿರಾರು ಕೋಟಿ ಹಣ ಸಂಪಾದಿಸಿದ. ಶೂನ್ಯದಿಂದ ವಸ್ತುಗಳನ್ನು ಸೃಷ್ಟಿ ಮಾಡುವುದಾಗಿ ನಂಬಿಸಿದ್ದ. ದೇಶದ ಪ್ರಧಾನಿ, ಗೃಹ ಮಂತ್ರಿ ಬಾಬಾ ಆಶೀರ್ವಾದ ಪಡೆದಿದ್ದರು. ಇಂತಹ ಸಂದರ್ಭದಲ್ಲಿ ಮೂಢ ನಂಬಿಕೆಗಳನ್ನು ತೊಡೆದು ಹಾಕಲು ಒಂದು ಆಂದೋಲನವನ್ನೇ ನಡೆಸುವ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಪಾಶ್ಚಾತ್ಯ ಔಷಧ ಪದ್ಧತಿ ಬೇಡ ಎಂದು ಹೇಳುವ ಬಾಬಾಗಳು ಸ್ವತಃ ಅನಾರೋಗ್ಯಪೀಡಿತರಾದರೆ ಅದೇ ಪಾಶ್ಚಾತ್ಯ ಪದ್ಧತಿ ಚಿಕಿತ್ಸೆಯ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಅವರು ಟೀಕಿಸಿದರು.

ಪವಾಡ ಮಾಡುವುದಾಗಿ ಹೇಳಿ ಹೇಗೆ ಮುಗ್ಧ ಜನರನ್ನು ವಂಚಿಸುತ್ತಾರೆ ಎಂಬುದನ್ನು ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಪುಟ್ಟಪರ್ತಿ ಸಾಯಿಬಾಬಾ ಬರಿಗೈಯಲ್ಲಿ ಹೇಗೆ ಬೂದಿ ಸೃಷ್ಟಿಸುತ್ತಿದ್ದರು ಎಂಬುದನ್ನು ಅವರು ತೋರಿಸಿದರು. ಬೂದಿಯ ಗುಳಿಗೆಯನ್ನು ಬೆರಳುಗಳ ಮಧ್ಯೆ ಇಟ್ಟುಕೊಂಡು ಅದನ್ನು ಪುಡಿ ಮಾಡುವ ಬಗೆಯನ್ನು ಅವರು ಸಭಿಕರಿಗೆ ತೋರಿಸಿಕೊಟ್ಟರು. ಶೂನ್ಯದಿಂದ ಚಿನ್ನದ ಸರವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮೊದಲೇ ಇಟ್ಟುಕೊಂಡಿದ್ದ ಸರವನ್ನು ಪವಾಡ ಮಾಡಿ ಸೃಷ್ಟಿಸಿದಂತೆ ನಾಟಕವಾಡುವ ವಿಧಾನವನ್ನು ಅವರು ಬಯಲು ಮಾಡಿದರು.

ಪುಟ್ಟಪರ್ತಿ ಸಾಯಿಬಾಬಾ ಅವರು ಪವಾಡ ಮಾಡಿದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ ಮೊದಲೇ ಇಟ್ಟುಕೊಂಡಿದ್ದ ವಸ್ತುವನ್ನು ತೆಗೆದು ಸೃಷ್ಟಿಸಿದಂತೆ ಬಿಂಬಿಸುತ್ತಿದ್ದರು ಎಂಬುದನ್ನು ಸಚಿತ್ರವಾಗಿ ವಿವರಿಸಿದರು. ಜಾತಿ ಮುಕ್ತ ವೇದಿಕೆಯ ಹಯವದನ ಮೂಡುಸಗ್ರಿ, ಡಾ, ಗುಂಡ್ಮಿ ಭಾಸ್ಕರ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.