ಉಡುಪಿ: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮುಂದಿನ ಎರಡು ವರ್ಷ ವೃಕ್ಷ ಸಮೃದ್ಧಿಗೆ ಆದ್ಯತೆ ನೀಡುವ ಮೂಲಕ ‘ಹಸಿರು ಪರ್ಯಾಯ’ಕ್ಕೆ ಸಂಕಲ್ಪ ಮಾಡಿದ್ದಾರೆ. ಈ ವಿನೂತನ ಸಂಕಲ್ಪಕ್ಕೆ ಕೇಂದ್ರದ ರಸಗೊಬ್ಬರ ಸಚಿವ ಅನಂತಕುಮಾರ್ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವು ಒದಗಿಸುವ ಆಶ್ವಾಸನೆ ನೀಡಿ ಶ್ರೀಗಳಿಗೆ ಮತ್ತಷ್ಟು ಉತ್ಸಾಹವನ್ನು ತುಂಬಿದರು.
ಉಡುಪಿಯ ರಾಜಾಂಗಣ ಸಮೀಪದ ಆನಂದತೀರ್ಥ ಮಂಟಪದಲ್ಲಿ ಸೋಮವಾರ ನಡೆದ ಪರ್ಯಾಯ ದರ್ಬಾರ್‌ನಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ‘ಹಸಿರು ಪರ್ಯಾಯ’ದ ಯೋಜನೆ ಪ್ರಕಟಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅನಂತಕುಮಾರ್, ‘ಉಡುಪಿ ಪರ್ಯಾಯಕ್ಕೆ ಹೊಸ ಅರ್ಥ ಕಲ್ಪಿಸಿಕೊಟ್ಟ ವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ಬಾರಿ ‘ಹಸಿರು ಪರ್ಯಾಯ’ಕ್ಕೆ ಸಂಕಲ್ಪ ಮಾಡಿರುವುದು ಸ್ವಾಗತಾರ್ಹ. ಈ ಮೂಲಕ ಪ್ರತಿಯೊಬ್ಬರು ಹಸಿರು ಸೇವೆಯನ್ನು ಮಾಡಬೇಕೆಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ’ ಎಂದು ಹೇಳಿದರು.
‘ಪರ್ಯಾಯದ ಅವಧಿಯಲ್ಲಿ ಸ್ವಾಮೀಜಿಯ ದರ್ಶನಕ್ಕೆ ಮಠಕ್ಕೆ ಬರುವ ಭಕ್ತರಿಗೆ ಪ್ರಸಾದ ಜತೆ ಒಂದು ಸಸಿಯನ್ನು ವಿತರಿಸಬೇಕು. ತುಳಸಿ, ಮಲ್ಲಿಗೆ ಅಥವಾ ಹಣ್ಣಿನ ಸಸಿಗಳನ್ನು ವಿತರಿಸಬಹುದು. ಅದಕ್ಕೆ ಬೇಕಾಗುವ ಎಲ್ಲ ಸಸಿಗಳನ್ನು ಸರ್ಕಾರ ನೀಡಲು ಸಿದ್ಧವಿದೆ. ಕರ್ನಾಟಕದಲ್ಲಿ ಆರೂವರೆ ಕೋಟಿ ಜನಸಂಖ್ಯೆಯಿದ್ದು, ಅಷ್ಟೇ ಸಂಖ್ಯೆಯಲ್ಲಿ ಸಸಿಗಳನ್ನು ಬೆಳೆಸಲು ಸ್ವಾಮೀಜಿ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.
ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿ, ‘ಮುಂದಿನ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಾಮೀಜಿ ಅವರು ಪರ್ಯಾಯದ ಸಂದರ್ಭದಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಸ್ವಾಮೀಜಿಯ ಯೋಜನೆಗೆ ಈ ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ನೆರವನ್ನು ನೀಡಲು ಶಿಫಾರಸು ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಬಳಿಕ ಉಭಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ವಿಶ್ವೇಶತೀರ್ಥ ಸ್ವಾಮೀಜಿ, ‘ಪ್ರಕೃತಿಯ ಸೇವೆಗೆ ಮತ್ತಷ್ಟು ಪ್ರೇರಣೆ ದೊರಕಿದಂತಾಗಿದೆ’ ಎಂದರು.
ಪ್ರೇರಣೆಯ ಶಕ್ತಿ
ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಮಾತನಾಡಿ, ‘ಪೇಜಾವರ ಸ್ವಾಮೀಜಿಯಿಂದ ಗುರುದೀಕ್ಷೆ ಪಡೆದ ನಾನು ಧನ್ಯ. ಸದಾ ಕ್ರಿಯಾಶೀಲ ವ್ಯಕ್ತಿತ್ವದ ಗುರುಗಳು ನನ್ನ ಸಾಧನೆಯ ಪ್ರೇರಣೆಯ ಶಕ್ತಿ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಅವರ ಮಾರ್ಗದರ್ಶನ ನನಗೆ ದಾರಿದೀಪವಾಗಿದೆ. ತಪ್ಪು ಮಾಡಿದಾಗ ಬುದ್ಧಿ ಹೇಳಿ, ಉತ್ತಮ ಕೆಲಸ ಮಾಡಿದಾಗ ಶ್ಲಾಘಿಸಿ ನನ್ನ ಬಾಳಿನಲ್ಲಿ ಚೈತನ್ಯ ತುಂಬಿದ್ದಾರೆ. ಗುರುಗಳ ಪರ್ಯಾಯ ಅವಧಿಯಲ್ಲಿ ಉಡುಪಿಗೆ ಆಗಾಗ ಬಂದು ಅನುಗ್ರಹವನ್ನು ಬೇಡುತ್ತೇನೆ’ ಎದರು.
ವಿಶ್ವಕ್ಕೆ ಮಾದರಿ
ಸಂಸದ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಉಡುಪಿ ಪರ್ಯಾಯವನ್ನು ಇಡೀ ದೇಶಕ್ಕೆ ಪರಿಚಯಿಸಿದ ಕೀರ್ತಿ ವಿಶ್ವೇಶತೀರ್ಥ ಸ್ವಾಮೀಜಿಗೆ ಸಲ್ಲುತ್ತದೆ. ಉಡುಪಿಯಲ್ಲಿ ಮಾತನಾಡಿದರೆ ನವದೆಹಲಿಯಲ್ಲಿ ಕೇಳಿಸುವ ಸಾಮರ್ಥ್ಯವನ್ನು ಹೊಂದಿರುವ ಅವರು, ಹಲವು ಪ್ರಧಾನಿಗಳ ಜತೆಗೆ ಆತ್ಮೀಯ ಒಡನಾಟವನ್ನು ಹೊಂದಿದ್ದಾರೆ. ಭಕ್ತರ ಜತೆ ಹಾಲು–ಸಕ್ಕರೆಯಂತೆ ಬೆರೆಯುವ ಸ್ವಾಮೀಜಿ ಅವರು ವಿಶ್ವಕ್ಕೆ ಮಾದರಿ’ ಎಂದು ಬಣ್ಣಿಸಿದರು. ಹಲವು ಪಂಡಿತರಿಗೆ, ವಿವಿಧ ಸಮಿತಿಗಳ ಪದಾಧಿಕಾರಿಗಳನ್ನು ಸ್ವಾಮೀಜಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.