ADVERTISEMENT

ಪಲಿಮಾರು ವಿದ್ಯಾಧೀಶಶ್ರೀ ಪುರಪ್ರವೇಶ

ಗಮನ ಸೆಳೆದ ಅದ್ಧೂರಿ ಮೆರವಣಿಗೆ: ಕಲಾ ತಂಡಗಳಿಂದ ಸಾಂಸ್ಕೃತಿಕ ಲೋಕದ ಅನಾವರಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 6:29 IST
Last Updated 4 ಜನವರಿ 2018, 6:29 IST
ಪಲಿಮಾರು ವಿದ್ಯಾಧೀಶಶ್ರೀ ಪುರಪ್ರವೇಶ
ಪಲಿಮಾರು ವಿದ್ಯಾಧೀಶಶ್ರೀ ಪುರಪ್ರವೇಶ   

ಉಡುಪಿ: ಇದೇ 18ರಂದು ಪರ್ಯಾಯ ಪೀಠ ಏರಲಿರುವ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಬುಧವಾರ ಪುರ ಪ್ರವೇಶ ಮಾಡಿದರು.

ಅದಮಾರಿನಿಂದ ಮೆರವಣಿಗೆಯಲ್ಲಿ ಬಂದ ಅವರಿಗೆ ನಗರದ ಜೋಡುಕಟ್ಟೆಯಲ್ಲಿ ಮಠದ ಭಕ್ತರು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು.

ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಸ್ವಾಮೀಜಿ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾತಂಡಗಳ ಪ್ರದರ್ಶನ ವೀಕ್ಷಿಸಿದರು. ಚಿನ್ನದ ರಥದ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದ ವಾಹನದಲ್ಲಿ ರಥಬೀದಿಯವರೆಗೆ ಅವರನ್ನು ವೈಭವದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ADVERTISEMENT

ರಥಬೀದಿ ತಲುಪಿದ ನಂತರ ಸ್ವಾಮೀಜಿ ಅವರು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದರು. ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಮಠವನ್ನು ಪ್ರವೇಶಿಸಿದರು.

ಗಮನ ಸೆಳೆದ ಮೆರವಣಿಗೆ: ಈ ಬಾರಿಯ ಪುರ ಪ್ರವೇಶ ಮೆರವಣಿಗೆಗೆ 70ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರುಗು ನೀಡಿದವು. ಈಚಿನ ವರ್ಷಗಳಲ್ಲಿ ಇದುವೇ ದೊಡ್ಡ ಮೆರವಣಿಗೆ ಎನಿಸಿತು. ಜನರು ಸಹ ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

ಬಿರುದಾವಳಿ, ತಟ್ಟೀರಾಯ, ಕೊಂಬು– ಕಹಳೆ, ಚೆಂಡೆ ವಾದನ, ಸ್ಯಾಕ್ಸೋಫೋನ್, ವೇದ ಘೋಷ ತಂಡಗಳು, ಭಜನಾ ತಂಡಗಳು, ನಂದಿ ಧ್ವಜ, ಗೊಂಬೆ ತಂಡಗಳು, ಗೊರವರ ಕುಣಿತ, ಮರಗಾಲು, ಚಿತ್ರದುರ್ಗದ ಬ್ಯಾಂಡ್ ಸೆಟ್‌, ಅರ್ಧನಾರೀಶ್ವರ, ಮಹಿಳಾ ನಗಾರಿ ತಂಡಗಳ ನೂರಾರು ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದರು. ಹುಲಿ ವೇಷ ತಂಡಗಳು ಸಾಹಸ ಪ್ರದರ್ಶಿಸಿ ಗಮನ ಸೆಳೆದವು. ತಾಲೀಮು ತಂಡಗಳು ಸಹ ಹುಬ್ಬೇರಿಸುವಂತೆ ಮಾಡಿದವು.

ಮೆರವಣಿಗೆಯ ಉಸ್ತುವಾರಿ ವಹಿಸಿಕೊಂಡಿದ್ದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಖುದ್ದು ಹಾಜರಿದ್ದು ಮೆರವಣಿಗೆ ಸಮಯಕ್ಕೆ ಸರಿಯಾಗಿ ಸಾಗುವಂತೆ ನೋಡಿಕೊಂಡರು. ನಗರದ ಪ್ರಮುಖ ರಸ್ತೆ ಕೆ.ಎಂ. ಮಾರ್ಗ ಜನರಿಂದ ತುಂಬಿ ಹೋಗಿತ್ತು. ಆಕರ್ಷಕ ಮೆರವಣಿಗೆ ವೀಕ್ಷಿಸಲು ಜನರು ಕಟ್ಟಡಗಳನ್ನು ಏರಿ ನಿಂತಿದ್ದರು.

ಮೆರವಣಿಗೆಯಲ್ಲಿ ಭಾಗವ ಹಿಸಿದವರಿಗೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಸಮಸ್ತ ಮುಸ್ಲಿಂ ಬಾಂಧವರು ಜಿಲ್ಲಾ ನ್ಯಾಯಾಲಯದ ಸಮೀಪ ಮಜ್ಜಿಗೆ ವಿತರಿಸಿದರು. ವಿವಿಧ ಸಂಘ– ಸಂಸ್ಥೆಗಳು ಸಹ ತಂಪು ಪಾನೀಯವನ್ನು ನೀಡಿದವು. ಸ್ವಚ್ಛತೆಗೂ ಆದ್ಯತೆ ನೀಡಲಾಯಿತು. ಮೆರವಣಿಗೆ ಮುಂದೆ ಸಾಗಿದ ತಕ್ಷಣ ರಸ್ತೆಯ ಮೇಲಿನ ಕಸವನ್ನು ತೆರವು ಮಾಡಲಾಯಿತು.

ಸಂಚಾರ ಬದಲಾವಣೆ: ಮೆರವಣಿಗೆ ಆರಂಭಕ್ಕೂ ಒಂದು ಗಂಟೆ ಮೊದಲೇ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಕಿನ್ನಿಮುಲ್ಕಿಯಲ್ಲಿ ವಾಹನ ಪ್ರವೇಶ ನಿಷೇಧಿಸಲಾಗಿತ್ತು. ಕರಾವಳಿ ಜಂಕ್ಷನ್‌ ಮೂಲಕ ವಾಹನಗಳಿಗೆ ಅವಕಾಶ ನೀಡಲಾಯಿತು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ ಇದ್ದರು.

ಸಮಯ ಪಾಲನೆ

ಸ್ವಾಮೀಜಿ ಅವರ ಪುರ ಪ್ರವೇಶ ಕಾರ್ಯಕ್ರಮ ನಿಗದಿತ ಸಮಯದಂತೆಯೇ ನಡೆಯಿತು. ಸ್ವಾಮೀಜಿ ಅವರು ನಾಲ್ಕು ಗಂಟೆಗೆ ಒಂದೆರಡು ನಿಮಿಷ ಇರುವಂತೆಯೇ ಜೋಡುಕಟ್ಟೆ ತಲುಪಿದರು. ಆ ನಂತರ ಸುಮಾರು 20 ನಿಮಿಷಗಳ ಕಾಲ ಮೆರವಣಿಗೆ ವೀಕ್ಷಿಸಿ 4.30ರ ಸುಮಾರಿಗೆ ಮೆರವಣಿಗೆ ವಾಹನ ಏರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.