ADVERTISEMENT

₹ 5000 ಕೋಟಿ ಆವರ್ತ ನಿಧಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 7:25 IST
Last Updated 29 ಜನವರಿ 2018, 7:25 IST

ಉಡುಪಿ: ಕೃಷಿ ಉತ್ಪನ್ನಗಳ ಬೆಲೆ ಸ್ಥಿರೀಕರಣಕ್ಕೆ ₹ 5 ಸಾವಿರ ಕೋಟಿ ಆವರ್ತ ನಿಧಿಯನ್ನು ಮೀಸಲಿಡಬೇಕೆಂದು ಕರ್ನಾಟಕ ಕೃಷಿ ಬೆಲೆ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಹೇಳಿದರು.

ಉಡುಪಿ ಜಿಲ್ಲಾ ಕೃಷಿಕ ಸಂಘ ಭಾನು ವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರೈತ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿಧಿ ಸ್ಥಾಪನೆಯಿಂದ ಕೃಷಿ ಉತ್ಪನ್ನಗಳನ್ನು ಸರ್ಕಾರ ಸಕಾಲದಲ್ಲಿ ಖರೀದಿಸಬಹುದು. ಆಗ ಬೆಂಬಲ ಬೆಲೆ ಕುಸಿಯುವುದಿಲ್ಲ. ಬೆಳೆಗಳ ಖರೀದಿಗೆ ಉನ್ನತ ಮಟ್ಟದ ವ್ಯವಸ್ಥೆ ಮಾಡಿದಂತಾಗುತ್ತದೆ ಎಂದರು.

ಕರಾವಳಿಯಲ್ಲಿ ಭತ್ತದ ಬೆಳೆ ಪ್ರಮುಖವಾಗಿದೆ. ಇಂದು ಸರ್ಕಾರ ₹1,550ನಲ್ಲಿ ಖರೀದಿಸಲು ಸಿದ್ಧವಾಗಿದೆ. ಜಿಲ್ಲಾಧಿಕಾರಿಗಳು ಭತ್ತದ ಬೆಳೆ ಕುಸಿತ ಆಗಿರುವ ಕುರಿತ ಅಂಕಿ ಅಂಶಗಳ ವರದಿಯನ್ನು ಕೃಷಿ ಬೆಲೆ ಆಯೋಗಕ್ಕೆ ಸಲ್ಲಿಸಿದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದರು.

ADVERTISEMENT

ಕೃಷಿ ಸಾಧಕರಾದ ಹರಿದಾಸ ರಾವ್ ಪಣಿಯೂರು, ಕೃಷ್ಣ ಪ್ರಭು, ಹಾಜಿ ರಫೀಕ್ ಅಹ್ಮದ್ ಮಲ್ಲಾರ್, ಕಾಮಿಲ್ ಸಿಕ್ವೇರಾ ಮಣಿಪುರ, ನಾರಾಯಣ ನಾಯಕ್ ಪೆರ್ಣಂಕಿಲ, ಹರಿಣಿ ಸುದರ್ಶನ ರಾವ್ ಕುಂಜಾರುಗಿರಿ, ಪ್ರಭಾಕರ ಶೆಟ್ಟಿ, ರಾಮಚಂದ್ರ ಭಟ್ ಪುಣಚೂರು ಸನ್ಮಾನಿಸಲಾಯಿತು. ಕಾಸರಗೋಡು ಸಿಪಿಸಿಆರ್‌ಐ ಪ್ರಧಾನ ವಿಜ್ಞಾನಿ ಡಾ. ರವಿ ಭಟ್ ದಿಕ್ಸೂಚಿ ಭಾಷಣ ಮಾಡಿದರು.

ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ರೋಟರಿ ಸಾರ್ವಜನಿಕ ಸಂಪರ್ಕ ಜಿಲ್ಲಾಧ್ಯಕ್ಷ ಮಂಜುನಾಥ ಉಪಾಧ್ಯ, ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಉದಯ ಹೆಗಡೆ ಇದ್ದರು.ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ವರದಿ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.