ADVERTISEMENT

ಸಂಘಟನೆ ನಿರಂತರ ಗೆಲುವಿಗೆ ಸಾಧನ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 7:13 IST
Last Updated 22 ಫೆಬ್ರುವರಿ 2018, 7:13 IST
ಮಂಗಳೂರು, ಶಿವಮೊಗ್ಗ ವಿಭಾಗಗಳ ಶಕ್ತಿಕೇಂದ್ರ ಪ್ರಮುಖರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿದರು.
ಮಂಗಳೂರು, ಶಿವಮೊಗ್ಗ ವಿಭಾಗಗಳ ಶಕ್ತಿಕೇಂದ್ರ ಪ್ರಮುಖರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿದರು.   

ಉಡುಪಿ: ‘ಕಾಂಗ್ರೆಸ್ ಪಕ್ಷದಂತೆ ವಾಮ ಮಾರ್ಗದ ಗೆಲುವು ಪಡೆಯದೇ ಕಾರ್ಯಕರ್ತರ ಪರಿಶ್ರಮದಿಂದಲೇ ಕರ್ನಾಟಕದಲ್ಲಿ ಗೆಲುವು ಸಾಧಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದರು.

ಮಂಗಳೂರು, ಶಿವಮೊಗ್ಗ ವಿಭಾಗಗಳ ಶಕ್ತಿಕೇಂದ್ರ ಪ್ರಮುಖರ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಬಿಜೆಪಿ ಹಂತ ಹಂತವಾಗಿ ಬೆಳವಣಿಗೆಯನ್ನು ಕಂಡುಕೊಂಡಿದೆ. ಈ ಬಾರಿ ಕರ್ನಾಟಕದಲ್ಲಿ ಚುನಾವಣೆಯಲ್ಲಿಯೂ ಗೆಲುವು ಸಾಧಿಸಬಹುದು. ಸಂಘಟನೆಯ ಮೂಲಕ ಚುನಾವಣೆ ಎದುರಿಸಿದರೆ ಮಾತ್ರ ನಿರಂತರ ಗೆಲುವು ಸಾಧ್ಯವಾಗುತ್ತದೆ. ಆದ್ದರಿಂದ ಕೈ ಮುಗಿದು ವಿನಂತಿ ಮಾಡುತ್ತೇವೆ, ಉತ್ತಮ ರೀತಿ ಸಂಘಟನೆ ಮಾಡಿ’ ಎಂದರು.

‘ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಅನೇಕ ರಾಜ್ಯದಲ್ಲಿ ಪಕ್ಷ ವಿಜಯ ಯಾತ್ರೆ ಮುಂದುವರೆಸಿದೆ. ಈಗ ಕರ್ನಾಟಕದತ್ತ ಮುಖ ಮಾಡಿದೆ. ಜಯದ ಯಾತ್ರೆ ದಕ್ಷಿಣ ಭಾರತ ಪ್ರವೇಶಿಸಲು ಕರ್ನಾಟಕದ ಕಾರ್ಯಕರ್ತರು ಹಗಲಿರುಳು ದುಡಿಯಬೇಕು. ಹೇಗೆ ಯಶಸ್ಸು ಸಾಧಿಸಬೇಕೆಂದು ನಿಮಗೆ ಹೇಳಿಕೊಡಬೇಕಾಗಿಲ್ಲ. ಶಕ್ತಿ ಕೇಂದ್ರ ಕಾರ್ಯಕರ್ತರು ಪಕ್ಷವನ್ನು ಬಹುಮತದಿಂದ ಗೆಲ್ಲಿಸುವ ಗುರಿಯೊಂದಿಗೆ ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಕಳೆದ 5 ವರ್ಷಗಳಿಂದ ಭ್ರಷ್ಟ ಆಳ್ವಿಕೆ ನೆಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಜನರು ಆಕ್ರೋಶಿತರಾಗಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಬೇಕು’ ಎಂದರು.

‘ಈ ಶಾ ಜಿಗಣೆ ಇದ್ದಂತೆ’

‘ಮಿಸ್‌ ಕಾಲ್‌ ನೀಡಿ ಸದಸ್ಯತ್ವ ಪಡೆದವರನ್ನು ಸಂಪರ್ಕಿಸಬೇಕು ಎಂದು ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ರಾಜ್ಯಮಟ್ಟದಲ್ಲಿ ಸೂಚನೆ ನೀಡಲಾಗಿತ್ತು. ಆದರೆ ಪ್ರಯೋಜನ ಆಗದ ಕಾರಣ ನಾನೇ ಜಿಲ್ಲಾ ಮಟ್ಟಕ್ಕೆ ಬಂದಿದ್ದೇನೆ. ಮುಂದೆ ವಿಧಾನಸಭಾ ಕ್ಷೇತ್ರಕ್ಕೂ ಬಂದು ನಿಮ್ಮ ಬೆವರು ಇಳಿಸುತ್ತೇನೆ. ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಶಾ ಜಿಗಣೆ ಇದಂತೆ, ಒಮ್ಮೆ ಒಂದು ಕೆಲಸ ಹಿಡಿದರೆ ಪೂರ್ಣವಾಗುವವರೆಗೆ ಬಿಡೋ ವ್ಯಕ್ತಿ ಅಲ್ಲ’ ಎಂದರು.

‘ಗುಜರಾತಿನ ಹಾಗೆ ಮತ್ತೆ ಗೆಲ್ಲುವಂತಹ ಚುನಾವಣಾ ತಂತ್ರವನ್ನು ಕರ್ನಾಟದಲ್ಲಿ ಆಳವಡಿಸಿಕೊಳ್ಳಬೇಕು. ರಾಜಕೀಯವಾಗಿ ಗುಜರಾತ್‌ ಚುನಾವಣೆ ಕೈ ತಪ್ಪಿ ಹೋಗಿತ್ತು. ಆದರೆ ಶಕ್ತಿ ಕೇಂದ್ರ, ವಿಧಾನಸಭಾ ಕ್ಷೇತ್ರ, ತಳಮಟ್ಟದ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಹಿಂದಿನ ಚುನಾವಣೆಗಿಂತ ಶೇ2ರಷ್ಟು ಅಧಿಕ ಮತ ಪಡೆದು ಗೆಲುವು ಸಾಧಿಸಿದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.