ಪುತ್ತೂರು: ಪರಿಸರ ಅಧ್ಯಯನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ವತಿಯಿಂದ ಸರ್ಕಾರದ ಪಶ್ಚಿಮ ಘಟ್ಟ ಕಾರ್ಯಪಡೆ 2013ರ ಆರಂಭದಲ್ಲಿ ನಡೆಸಿದ `ಕುಮಾರಧಾರಾ ಅರಣ್ಯ ಜೀವವೈವಿಧ್ಯ ಪರಿಸ್ಥಿತಿಯ ಅಧ್ಯಯನ ವರದಿ'ಯನ್ನು ಜೂನ್ 6ರಂದು ಪುತ್ತೂರಿನ ಜಿ.ಎಲ್. ಸಭಾಭವನದಲ್ಲಿ ನಡೆಯುವ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ತಿಳಿಸಿದರು.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನದಿ ಕಣಿವೆಗಳ ಅಧ್ಯಯನಕ್ಕೆ ಕುಮಾರಧಾರಾ ಅಧ್ಯಯನ ಒಂದು ಮಾದರಿಯಾಗಿದೆ. ಈ ವರದಿಯನ್ನು ಜೂನ್ 6ರಂದು ನಡೆಯುವ `ಕುಮಾರಧಾರಾ ನದಿ ಕಣಿವೆಯ ಪರಿಸರ ಪರಿಸ್ಥಿತಿ ಕುರಿತು ರಾಜ್ಯ ಮಟ್ಟದ ವಿಶೇಷ ವಿಚಾರ ಸಂಕಿರಣ'ದಲ್ಲಿ ವಿಜ್ಞಾನಿಗಳು ಬಿಡುಗಡೆ ಮಾಡಲಿದ್ದಾರೆ ಎಂದರು.
ವಿಚಾರ ಸಂಕಿರಣದಲ್ಲಿ ವಿಶೇಷವಾಗಿ ಕುಮಾರಧಾರಾ ನದಿ ಕಣಿವೆಯ ಪ್ರಚಲಿತ ಸ್ಥಿತಿಗತಿಯ ಅವಲೋಕನ, ಕೈಗೊಳ್ಳಬೇಕಾದ ಪರಿಸರ ಅರಣ್ಯ ಕಾರ್ಯ ಚಟುವಟಿಕೆಗಳು, ಸರ್ಕಾರದ ಮಟ್ಟದಲ್ಲಿ ಪರಿಸರ ಒತ್ತಡ ನಿರ್ಮಾಣ, ಕಣಿವೆಯ ರೈತರು ಹಮ್ಮಿಕೊಳ್ಳಬೇಕಾದ ವೃಕ್ಷಾ ರೋಹಣ ಜಾಗೃತಿಯ ಚಟುವಟಿಕೆ, ಆಗಬೇಕಾದ ಇನ್ನಷ್ಟು ಅಧ್ಯಯನ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿ ತಜ್ಞರ ಮಾರ್ಗದರ್ಶನ ದೊಂದಿಗೆ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು.
ಪಶ್ಚಿಮ ಘಟ್ಟ ಇಂದು ದೇಶ ಮಟ್ಟದಲ್ಲಿ ಚರ್ಚೆಯಲ್ಲಿದೆ. ಈ ಸಹ್ಯಾದ್ರಿಯ ನದಿ ಕಣಿವೆಗಳಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಜೀವ ಸೆಲೆಗಳಾಗಿವೆ. ಲಕ್ಷಾಂತರ ಜನರ ಬದುಕಿಗೆ ಪೂರಕವಾದ ಅಪಾರ ನಿಸರ್ಗ ಭಂಡಾರ ಈ ನದಿ ಪ್ರದೇಶದಲ್ಲಿದೆ.
ಇದೀಗ ಮಾನವ ಹಸ್ತಕ್ಷೇಪ ದಿಂದಾಗಿ ಹಲವು ಆಪತ್ತುಗಳಿಗೆ ಸಿಲುಕಿವೆ. ಸಂಪರ್ಕ ರಸ್ತೆ, ರೈಲು ಮಾರ್ಗ, ತಂತಿ ಮಾರ್ಗ, ಅಣೆಕಟ್ಟು, ಅರಣ್ಯನಾಶ, ಅತಿಕ್ರಮಣ ಸೇರಿದಂತೆ ಕಿರು ಜಲವಿದ್ಯುತ್ ಯೋಜನೆಗಳ ಸರಪಣಿಗಳು ನದಿ ಮತ್ತು ಪರಿಸರವನ್ನು ನುಂಗಿ ಹಾಕಲು ಸಿದ್ದವಾಗುತ್ತಿದೆ.
ಈ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಚಾರ ಸಂಕಿರಣವನ್ನು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸು ವರು. ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಅಧ್ಯಕ್ಷತೆ ವಹಿಸುವರು.
ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾದ ಡಾ.ಟಿ.ವಿ.ರಾಮಚಂದ್ರ, ಡಾ.ಸುಭಾಶ್ಚಂದ್ರ, ಜಿ.ಆರ್.ರಾವ್, ಮಂಗಳೂರು ವಿಶ್ವವಿದ್ಯಾಲ ಯದ ಡಾ.ಕೃಷ್ಣ ಕುಮಾರ್ ಮತ್ತು ಡಾ.ಸೂರ್ಯಪ್ರಕಾಶ್ ಶೆಣೈ, ಪಶ್ಚಿಮ ಘಟ್ಟದ ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ, ಕಿಶೋರ್ ಕುಮಾರ್ ಹಾಸನ, ಪ್ರೊ.ಎನ್. ಎ. ಮಧ್ಯಸ್ಥ, ಡಾ.ಕೇಶವ ಕೋರ್ಸೆ, ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದೇವಿಪ್ರಸಾದ್ ಮತ್ತು ಎಚ್.ಎಲ್.ವೆಂಕಟೇಶ್, ಹೈಕೋರ್ಟ್ ವಕೀಲ ಶ್ರಿನಿವಾಸ ರಾವ್, ಸುಳ್ಯದ ಪರಿಸರ ಹೋರಾಟ ಗಾರ ಎ.ಕೆ. ಹಿಮಕರ ಮತ್ತಿತರರು ಭಾಗವಹಿಸುವರು ಎಂದು ಅವರು ತಿಳಿಸಿದರು.
ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ರಾಜೇಶ್ ಬೀರಂತಡ್ಕ, ಸಮಿತಿ ಕಾರ್ಯದರ್ಶಿ ಕಿರಣ್ ಗೋಗಟೆ ಹೊಸ್ಮಠ, ಖಜಾಂಜಿ ರಘುನಾಥ ಹೆಬ್ಬಾರ್ ಹೊಸ್ಮಠ, ಕುಟ್ರುಪಾಡಿ ಗ್ರಾ.ಪಂ. ಸದಸ್ಯೆ ಹಾಗೂ ಸಮಿತಿ ಸದಸ್ಯೆ ಎಲ್ಸಿ ತೋಮಸ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.