ADVERTISEMENT

ದೊಡ್ಡ ಬ್ಯಾಂಕ್‌ಗಳು ಬೇಕಿಲ್ಲ; ಸಶಕ್ತ ಬ್ಯಾಂಕ್‌ಗಳು ಅಗತ್ಯ

ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಹಾಗೂ ನೌಕರರ ಸಂಘಟನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 15:10 IST
Last Updated 16 ಸೆಪ್ಟೆಂಬರ್ 2019, 15:10 IST
ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಹಾಗೂ ನೌಕರರ ಸಂಘಟನೆ ಸೋಮವಾರ ಕಾರ್ಪೊರೇಷನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿತು.‌
ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಹಾಗೂ ನೌಕರರ ಸಂಘಟನೆ ಸೋಮವಾರ ಕಾರ್ಪೊರೇಷನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿತು.‌   

ಉಡುಪಿ: ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವೀಲಿನಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಇದು ದೇಶದ ಆರ್ಥಿಕ ವ್ಯವಸ್ಥೆಗೆ ಪೆಟ್ಟುನೀಡಲಿದೆ ಎಂದು ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಹಾಗೂ ನೌಕರರ ಸಂಘಟನೆ ಸೋಮವಾರ ಕಾರ್ಪೊರೇಷನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿತು.‌

1906, ಮಾರ್ಚ್‌ 12ರಂದು ಉಡುಪಿಯಲ್ಲಿ ಹಾಜಿ ಅಬ್ದುಲ್ಲ ಅವರು ಕಾರ್ಪೊರೇಷನ್ ಬ್ಯಾಂಕ್ ಆರಂಭಿಸಿದರು. ಸ್ವದೇಶಿ ಚಳವಳಿ ಹಾಗೂ ಜನಸಾಮಾನ್ಯರ ಒಳಿತಾಗಿ ಶತಮಾನದ ಹಿಂದೆ ಆರಂಭಿಸಲಾದ, ಉತ್ತಮ ನಿರ್ವಹಣೆಯೊಂದಿಗೆ ಜನರ ವಿಶ್ವಾಸ ಗಳಿಸಿದ್ದ ಬ್ಯಾಂಕ್ ಅನ್ನು ವಿಲೀನೀಕರಣದ ಹೆಸರಿನಲ್ಲಿ ಮುಚ್ಚುವ ಷಡ್ಯಂತ್ರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈಗಾಗಲೇ ಎಸ್‌ಬಿಐ ಬ್ಯಾಂಕ್‌ನೊಂದಿಗೆ ಸಹವರ್ತಿ ಬ್ಯಾಂಕ್‌ಗಳನ್ನು ಹಾಗೂ ವಿಜಯಾ ಬ್ಯಾಂಕ್‌, ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನಗೊಳಿಸಲಾಗಿದೆ. ಈಗ 10 ಬ್ಯಾಂಕ್‌ಗಳ ವಿಲೀನದೊಂದಿಗೆ 6 ಬ್ಯಾಂಕ್‌ಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಬ್ಯಾಂಕ್‌ಗಳ ವಿಲೀನದಿಂದ ಆರ್ಥಿಕತೆ ಬಲಗೊಳ್ಳುವುದಿಲ್ಲ. ಬದಲಾಗಿ ಅನುತ್ಪಾದಕ ಆಸ್ತಿಯ (ಎನ್‌ಪಿಎ) ಪ್ರಮಾಣ ಹೆಚ್ಚಾಗುತ್ತದೆ ಎಂದು ಟೀಕಿಸಿದರು.

ADVERTISEMENT

ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕೈಗಾರಿಕಾ ಕ್ಷೇತ್ರ ನಿರಾಶಾದಾಯಕವಾಗಿದೆ. ಇಂತಹ ಸ್ಥಿತಿಯಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುವುದರ ಬದಲು ಬ್ಯಾಂಕ್‌ಗಳ ವಿಲೀನಕರಣದ ಅಗತ್ಯ ಇರಲಿಲ್ಲ. ಇದರಿಂದ ಆರ್ಥಿಕತೆ ಮತ್ತಷ್ಟು ಕುಸಿಯಲಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ. ದೇಶಕ್ಕೆ ದೊಡ್ಡ ಬ್ಯಾಂಕ್‌ಗಳ ಅವಶ್ಯಕತೆ ಇಲ್ಲ; ಬದಲಾಗಿ ಸಶಕ್ತ ಬ್ಯಾಂಕ್‌ಗಳ ಅಗತ್ಯತೆ ಇದೆ ಎಂದರು.

ಬ್ಯಾಂಕ್‌ಗಳ ವಿಲೀನದಿಂದ ಗ್ರಾಮೀಣ ಭಾಗಕ್ಕೆ ಬ್ಯಾಂಕಿಂಗ್ ಸೌಲಭ್ಯ ವಿಸ್ತಾರಕ್ಕೆ ಪೆಟ್ಟುಬೀಳಲಿದೆ. ಸಾವಿರಾರು ಹಳ್ಳಿಗಳು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ರಾಮ್‌ಮೋಹನ್‌, ಅಧಿಕಾರಿಗಳ ಸಂಘಟನೆಯ ಮುಖಂಡರಾದ ಅಶೋಕ್ ಕೋಟ್ಯಾನ್‌, ಹೇಮಂತ್ ಮಾತನಾಡಿದರು. ಸಂಘಟನೆಯ ಪದಾಧಿಕಾರಿಗಳಾದ ಮನೋಜ್‌ ಕುಮಾರ್, ವಂಶಿಕೃಷ್ಣ, ಜಯನ್ ಮಲ್ಪೆ, ರಮೇಶ್,ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್‌ ಡಿಸೋಜಾ ಇದ್ದರು.

ಕಾರ್ಪೊರೇಷನ್ ಬ್ಯಾಂಕ್‌ ಉಡುಪಿ ಕಾರ್ಯದರ್ಶಿ ನಾಗೇಶ್ ನಾಯಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.