ADVERTISEMENT

ಚಂದ್ರಶೇಖರ್‌ಗೆ ಐಸಿಯುನಲ್ಲಿ ಚಿಕಿತ್ಸೆ

ಬುಧವಾರ 5 ಯುನಿಟ್ ರಕ್ತ ಪೂರೈಕೆ: ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 15 ಮೇ 2019, 15:21 IST
Last Updated 15 ಮೇ 2019, 15:21 IST

ಉಡುಪಿ: ಸುವರ್ಣ ತ್ರಿಭುಜ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಭಟ್ಕಳದ ರಮೇಶ್ ಅವರ ಸಹೋದರ ಚಂದ್ರಶೇಖರ್‌ಗೆ ನಗರದ ಆದರ್ಶ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದೆ.

ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ಬುಧವಾರ ಚಂದ್ರಶೇಖರ್ ಜೀವ ಉಳಿಸಲು ಹಲವು ದಾನಿಗಳು ರಕ್ತದಾನ ಮಾಡಿದರು. 5 ಯುನಿಟ್ ರಕ್ತವನ್ನು ಆಸ್ಪತ್ರೆಗೆ ಪೂರೈಸಲಾಯಿತು.

ಚಂದ್ರಶೇಖರ್ ಅವರ ಲಿವರ್ ವಿಫಲವಾಗಿದ್ದು, ಕಿಡ್ನಿಗಳು ಸಹ ಕಾರ್ಯ ನಿರ್ವಹಣೆ ನಿಲ್ಲಿಸುವ ಹಂತ ತಲುಪಿವೆ. ಅಪಾಯಕಾರಿ ವಿಷ ದೇಹದ ಅಂಗಾಂಗಗಳಿಗೆ ಹಾನಿಯಂಟು ಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ಖಿನ್ನತೆ ಕಾಡಿತ್ತು:

ಸಹೋದರ ರಮೇಶ್ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬಳಿಕ ಚಂದ್ರಶೇಖರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಕೆಲಸಕ್ಕೂ ಹೋಗದೆ ಮನೆಯಲ್ಲಿ ಒಂಟಿಯಾಗಿರುತ್ತಿದ್ದರು. ಈಚೆಗೆ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು ಸಿಕ್ಕ ಬಳಿಕ ತೀವ್ರವಾಗಿ ಮನನೊಂದು ಇಲಿ ಪಾಷಾಣ ಸೇವನೆ ಮಾಡಿದ್ದರು.

ವಿಷ ಸೇವನೆ ವಿಚಾರವನ್ನು ಬಹಿರಂಗ ಮಾಡದ ಪರಿಣಾಮ ಅವರ ಅಂಗಾಂಗಗಳು ವೈಫಲ್ಯಗೊಂಡಿವೆ. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಸೋಮವಾರ ರಾತ್ರಿಯಿಂದ ಚಂದ್ರಶೇಖರ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಹೋದರ ನಾಗರಾಜ್ ಜತೆಯಲ್ಲಿದ್ದಾರೆ.

ದೆಹಲಿಗೆ ನಿಯೋಗ

ಮತ್ತೊಂದೆಡೆ ಮಲ್ಪೆ ಮೀನುಗಾರರ ಸಂಘದ ನಿಯೋಗ ಗುರುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡುವ ಸಾಧ್ಯತೆಗಳಿವೆ. ಭೇಟಿ ವೇಳೆ ಬೋಟ್‌ ದುರಂತದ ತನಿಖೆಗೆ ಒತ್ತಾಯಿಸುವುದು ಹಾಗೂ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಕೇಂದ್ರ ಸರ್ಕಾರ ಗರಿಷ್ಠ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.‌

ಕರಾರಿಗೆ ಸಹಿ:

ಇತ್ತ ನಾಪತ್ತೆಯಾಗಿರುವ ಮೀನುಗಾರರಾದ ಚಂದ್ರಶೇಖರ್ ಕೋಟ್ಯಾನ್ ಹಾಗೂ ಗಂಗಾಧರ ಸಾಲ್ಯಾನ್ ಕುಟುಂಬ ಸರ್ಕಾರದಿಂದ ಪರಿಹಾರ ಪಡೆಯುವ ಸಂಬಂಧ ಅಗತ್ಯವಿರುವ ಕರಾರು ಪತ್ರಕ್ಕೆ ಸಹಿ ಹಾಕಿ ಮೀನುಗಾರಿಕಾ ಇಲಾಖೆ ಅಧಿಕಾರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಬೋಟ್ ದುರಂತದಲ್ಲಿ ನಾಪತ್ತೆಯಾದ ಕುಟುಂಬಗಳಿಗೆ ಈಗಾಗಲೇ ರಾಜ್ಯ ಸರ್ಕಾರ ₹10 ಲಕ್ಷ ಪರಿಹಾರ ಘೋಷಿಸಿದ್ದು, ಇಂಡೆಮ್ನಿಟಿ ಬಾಂಡ್ ಪಡೆದು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೀನುಗಾರರ ಕುಟುಂಬದಿಂದ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.