ADVERTISEMENT

ಶಾಸಕರ ಆರೋಪ ಆಧಾರರಹಿತ: ಕಾಂಚನ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 6:56 IST
Last Updated 28 ಸೆಪ್ಟೆಂಬರ್ 2024, 6:56 IST
ಪ್ರಸಾದ್ ರಾಜ್ ಕಾಂಚನ್
ಪ್ರಸಾದ್ ರಾಜ್ ಕಾಂಚನ್   

ಉಡುಪಿ: ಜಿಲ್ಲೆಯಲ್ಲಿ 40 ಸಾವಿರ ಬಿಪಿಎಲ್‌ ಪಡಿತರ ಚೀಟಿ ರದ್ದುಗೊಂಡಿದೆ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಅವರು ಮಾಡಿರುವ ಆರೋಪ ಆಧಾರರಹಿತವಾದುದು ಎಂದು ಕಾಂಗ್ರೆಸ್‌ ಮುಖಂಡ ಪ್ರಸಾದ್‌ ರಾಜ್‌ ಕಾಂಚನ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈ ಹೇಳಿಕೆ ನಿಜವಲ್ಲದಿದ್ದರೆ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.

₹1.20 ಲಕ್ಷಕ್ಕಿಂತ ಅಧಿಕ ಆದಾಯ ಇರುವವರು ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಲ್ಲ ಎಂದು ಸರ್ಕಾರದ ಆದೇಶವೇ ಇದೆ. ಅಂಥವರನ್ನು ಗುರುತಿಸಿ ಅವರ ಪಡಿತರ ಚೀಟಿಯನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಶಾಸಕರು ಇದೇ ರೀತಿ ಆಧಾರರಹಿತವಾದ ಆರೋಪಗಳನ್ನು ಮಾಡಿ, ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೆ ಅವರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬರುತ್ತಿಲ್ಲ ಎಂದು ಶಾಸಕರು ಆರೋಪ ಮಾಡಿದ್ದಾರೆ. ನಿಯಮ ಪ್ರಕಾರ ಬರಬೇಕಾದ ಅನುದಾನ ಬರುತ್ತಿದೆ. ಸಂತೆಕಟ್ಟೆ ಅಂಡರ್‌ ಪಾಸ್‌ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ, ಉಡುಪಿ–ಮಲ್ಪೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಿಜೆಪಿಯ ಸಂಸದರೇ ಇರುವಾಗ ಈ ವಿಷಯಕ್ಕೆ ಶಾಸಕರು ಯಾಕೆ ಸ್ಪಂದನೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ನಿಮ್ಮದೇ ಇರುವಾಗ ಕೇಂದ್ರದಿಂದ ಬೇಕಾದಷ್ಟು ಅನುದಾನ ಯಾಕೆ ತರುವುದಿಲ್ಲ ಎಂದು ಪ್ರಶ್ನಿಸಿದರು.

ಬಡವರಿಗೆ ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ಅವರ ಸರ್ಕಾರ ನೀಡಿದಷ್ಟು ಅನುದಾನ ನಿಮ್ಮ ಪಕ್ಷ ನೀಡಿದೆಯಾ? ಎಂದರು. ಪರ್ಯಾಯಕ್ಕೆ ಅನುದಾನ ಕೊಡುತ್ತೇವೆ ಎಂದು ಸರ್ಕಾರ ಹೇಳಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾ ತಂಡಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗಿತ್ತು ಎಂದೂ ಅವರು ತಿಳಿಸಿದರು.

ದಿನಕರ ಹೇರೂರು, ಶರತ್‌ ಕುಂದರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.