ADVERTISEMENT

ಮೀನುಗಾರರ ಪತ್ತೆಗೆ ಮಿಲಿಟರಿ ಬಳಸಿ: ಸಂಬಂಧಿಕರ ಅಳಲು

ನಾಪತ್ತೆಯಾದ ಮೀನುಗಾರರ ಕುಟಂಬ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 20:00 IST
Last Updated 21 ಜನವರಿ 2019, 20:00 IST
ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಹೆಸರಿನ ಮೀನುಗಾರಿಕೆ ಬೋಟ್‌
ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಹೆಸರಿನ ಮೀನುಗಾರಿಕೆ ಬೋಟ್‌   

ಉಡುಪಿ: ‘ತಮ್ಮ ಊಟ ಮಾಡಿ ಎಷ್ಟು ದಿನಗಳಾಯಿತೋ, ಅವನಿಗೆ ಊಟ ಹಾಕಿದ್ದಾರೋ, ಇಲ್ಲವೋ ? ನಮಗೆ ಬೋಟ್‌ ಬೇಡ, ತಮ್ಮನನ್ನು ಜೀವಸಹಿತ ಬಿಟ್ಟರೆ ಸಾಕು. ಹೀಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ದಾಮೋದರ ಸಾಲ್ಯಾನ್‌ ಅವರ ಅಕ್ಕ ರಮಣಿ ಕಣ್ಣೀರು ಸುರಿಸಿದರು.

ಮಲ್ಪೆಯ ಬಡಾನಿಡಿಯೂರು ಸಮೀಪದ ಪಾವಂಜೆಗುಡ್ಡೆ ಗ್ರಾಮದಲ್ಲಿರುವ ದಾಮೋದರ ಸಾಲ್ಯಾನ್ ಮನೆಯಲ್ಲಿ ಆತಂಕ ಆವರಿಸಿದೆ. ತಿಂಗಳು ಕಳೆದರೂ ಯಾವುದೇ ವಿದ್ಯಮಾನಗಳು ಸಿಗದಿರುವುದು ಕುಟುಂಬವನ್ನು ಕಂಗೆಡಿಸಿದೆ. ದಾಮೋದರ ಅವರ ಬರುವಿಕೆಗಾಗಿ ಕುಟುಂಬ ಬಾಗಿಲು ಕಾಯುತ್ತಿದೆ.

ಕರಾವಳಿ ಕಾವಲು ಪಡೆ, ನೌಕಾಪಡೆ ತಿಂಗಳುಗಟ್ಟಲೆ ಸಮುದ್ರದಲ್ಲಿ ಶೋಧ ನಡೆಸಿದರೂ ಬೋಟ್‌ ಪತ್ತೆಯಾಗಿಲ್ಲ. ಇದು ಖಂಡಿತ ಕಡಲ್ಗಳ್ಳರ ಕೃತ್ಯವೇ. ತಕ್ಷಣ ಮಿಲಿಟರಿ ನೆರವು ಪಡೆದು ಭೂಮಿಯ ಇಂಚಿಂಚೂ ಶೋಧ ನಡೆಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ನಾಪತ್ತೆ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಕಾರ್ಯಾಚರಣೆ ನಡೆಸಬೇಕು ಎಂದು ಒತ್ತಾಯಿಸುತ್ತಾರೆ ಸಹೋದರ ಗಂಗಾಧರ್‌.

ADVERTISEMENT

ರಾಜಕಾರಣಿಗಳ ಕುರ್ಚಿ ಅಲುಗಾಡುತ್ತಿದೆ. ಅದನ್ನು ಭದ್ರಪಡಿಸುವಲ್ಲಿ ತೋರುವ ಕಾಳಜಿಯನ್ನು ಮೀನುಗಾರರ ಪತ್ತೆಗೆ ತೋರುತ್ತಿಲ್ಲ. ಇವರಿಗೆಲ್ಲ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮೀನುಗಾರರು ತಕ್ಕ ಪಾಠ ಕಲಿಸುತ್ತೇವೆ. ಮಂಗಳೂರಿನಿಂದ ಕಾರವಾರದವರೆಗೆ ಮತಯಾಚನೆಗೆ ಬಾರದಂತೆ ನಿರ್ಬಂಧ ಹಾಕುತ್ತೇವೆ ಎಂದು ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದರು ಗಂಗಾಧರ್‌.

ಮೀನುಗಾರರ ಶೋಧದಲ್ಲಿ ಕಠಿಣ ಪರಿಶ್ರಮ ಕಾಣುತ್ತಿಲ್ಲ. ನೆಪಮಾತ್ರಕ್ಕೆ ಸಮುದ್ರದ ಕೆಲಭಾಗಗಳಲ್ಲಿ ಮಾತ್ರ ಹುಡುಕಾಟ ನಡೆಸಿದರೆ ಸಾಲದು. ದುರ್ಗಮ ಪ್ರದೇಶಗಳಲ್ಲಿ ಹುಡುಕಾಡಬೇಕು. ಮೀನುಗಾರರು ನಾಪತ್ತೆಯಾಗಿದ್ದಾರೆ ಎನ್ನಲಾದ ಸಮೀಪದ ನದಿಗಳ ಉದ್ದಗಲಕ್ಕೂ ಹುಡುಕಾಟ ನಡೆಸಬೇಕು ಎಂದು ಕುಟುಂಬದ ಸದಸ್ಯರು ಒತ್ತಾಯಿಸಿದರು.

ಬೋಟ್‌ ಅಪಹರಣವಾಗಿದೆ ಎಂಬ ಬಲವಾದ ಸಂಶಯ ಇದೆ. ಸಮುದ್ರ ಹಾಗೂ ಭೂಪ್ರದೇಶದಲ್ಲಿ ಶೋಧ ನಡೆಸಬೇಕು. ಮೀನುಗಾರರನ್ನು ಅಪಹರಣಕಾರರು ಅಪಹರಿಸಿದ್ದರೆ ಸಮುದ್ರದಲ್ಲಿ ಕೂಡಿಹಾಕಲು ಸಾಧ್ಯವಿಲ್ಲ. ಭೂಮಿಯ ಮೇಲೆ ಇಟ್ಟಿರಬೇಕು ಎನ್ನುತ್ತಾರೆ ಅವರು.

ತನಿಖೆ ತೀವ್ರಗೊಳ್ಳಲಿ: ಕಾರವಾರ ಹಾಗೂ ಉಡುಪಿ ಜಿಲ್ಲೆಯ ಮೀನುಗಾರರು ಹಾಗೂ ಇಬ್ಬರು ಅಧಿಕಾರಿಗಳನ್ನೊಳಗೊಂಡ ತಂಡ ಮಹಾರಾಷ್ಟ್ರದ ಮಾಲ್ವಾನ್‌ ಸಮುದ್ರ ತೀರದಲ್ಲಿ ಡಿ.23ರ ನಂತರ 1 ವಾರ ಶೋಧ ನಡೆಸಿತು. ಮುಂಬೈವರೆಗೆ ಹುಡುಕಾಟ ಮಾಡಲಾಯಿತು. ಆದರೆ, ಅಲ್ಲಿನ ಮೀನುಗಾರರು ಹಾಗೂ ಪೊಲೀಸರು ಸರಿಯಾಗಿ ಸಹಕಾರ ನೀಡಲಿಲ್ಲ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸದರು.

ಕೇವಲ ಮೀನುಗಾರರ ವಿಚಾರಣೆ ಮಾಡುವಷ್ಟರಲ್ಲಿ ಪೊಲೀಸರ ತನಿಖೆ ಮುಕ್ತಾಯವಾಗುತ್ತಿದೆ. ಆಳಕ್ಕಿಳಿದು ತನಿಖೆ ನಡೆಯುತ್ತಿಲ್ಲ ಎಂಬ ಸಂಶಯವಿದೆ. ಮಾಲ್ವಾನ್‌ ಪ್ರದೇಶದ ತೀರದಿಂದ ಹೆಚ್ಚೆಂದರೆ 500 ಮೀಟರ್‌ನಷ್ಟು ಹುಡುಕಾಟ ನಡೆಸಿರಬಹುದು ಅಷ್ಟೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.