ADVERTISEMENT

ಗಾಂಧಿಯ ರಾಮರಾಜ್ಯದ ಪರಿಕಲ್ಪನೆ ಅನುಷ್ಠಾನಗೊಂಡಿಲ್ಲ

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ. ಶ್ರೀರಾಜ್‌ ಗುಡಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 12:35 IST
Last Updated 2 ಅಕ್ಟೋಬರ್ 2019, 12:35 IST
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಣಿಪಾಲ ಮಾಹೆಯ ಎಂಐಸಿಯ ಸಹಾಯಕ ಪ್ರಾಧ್ಯಾಪಕ ಪ್ರೊ. ಶ್ರೀರಾಜ್‌ ಗುಡಿ ಮಾತನಾಡಿದರು.ಪ್ರಜಾವಾಣಿ ಚಿತ್ರ
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಣಿಪಾಲ ಮಾಹೆಯ ಎಂಐಸಿಯ ಸಹಾಯಕ ಪ್ರಾಧ್ಯಾಪಕ ಪ್ರೊ. ಶ್ರೀರಾಜ್‌ ಗುಡಿ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಗಾಂಧೀಜಿ ಭಾರತ ದೇಶಕ್ಕೆ ಸೀಮಿತವಾಗಿರದೆ, ಇಡೀ ಜಗತ್ತಿಗೆ ಪ್ರೇರಣ ಶಕ್ತಿಯಾಗಿದ್ದಾರೆ. ಅವರು ತನ್ನ ವಿಚಾರಧಾರೆಗಳಿಂದ ಇಂದಿಗೂ ಪ್ರಚಲಿತದಲ್ಲಿದ್ದಾರೆ. ಆದರೆ ನಾವು ಗಾಂಧಿಯನ್ನು ಸ್ವಚ್ಛತೆಯ ಚಿಹ್ನೆಯಾಗಿ ಮಾತ್ರ ಬಳಸಿಕೊಂಡಿದ್ದೇವೆಯೇ ಹೊರತು, ಅವರ ರಾಮರಾಜ್ಯದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿಲ್ಲ ಎಂದು ಮಣಿಪಾಲ ಮಾಹೆಯ ಎಂಐಸಿಯ ಸಹಾಯಕ ಪ್ರಾಧ್ಯಾಪಕ ಪ್ರೊ. ಶ್ರೀರಾಜ್‌ ಗುಡಿ ಬೇಸರ ವ್ಯಕ್ತಪಡಿಸಿದರು.

ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಎಂಜಿಎಂ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಗಾಂಧೀಜಿ ಕೇವಲ ರಾಷ್ಟ್ರವಾದಿ ಆಗಿರಲಿಲ್ಲ, ವ್ಯವಸ್ಥೆಯಲ್ಲಿ ಸ್ಪಲ್ಪಮಟ್ಟಿನ ಹರಾಜಕತೆ ಇರಬೇಕೆಂಬುದನ್ನು ಕೂಡ ಬಯಸಿದ್ದರು. ಆಗ ಮಾತ್ರ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ ಎಂಬುವುದನ್ನು ಪ್ರತಿಪಾದಿಸಿದ್ದರು. ಆದ್ದರಿಂದ ಇಂದಿನ ಆಡಳಿತದಲ್ಲಿ ಗಾಂಧಿ ವಿಚಾರಧಾರೆಗಳನ್ನು ಅನುಷ್ಠಾನಕ್ಕೆ ತರುವುದರಿಂದ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ಗ್ರಾಮೀಣ ಜನತೆ ಉದ್ಯೋಗ ಸೃಷ್ಟಿಸುವ ಮೂಲಕ ಆರ್ಥಿಕತೆಯನ್ನು ಸಬಲೀಕರಣಗೊಳಿಸಬೇಕು. ನಮ್ಮ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ಮೂಲಕ ಗಾಂಧಿ ಪರಿಕಲ್ಪನೆಯನ್ನು ಸಹಕಾರಗೊಳಿಸಬೇಕು. ಗಾಂಧೀಜಿ ಸ್ವರಾಜ್ಯದ ಅನುಷ್ಠಾನಕ್ಕಾಗಿ ಹೋರಾಟ ಮಾಡಿದ್ದರು. ಅವರು ನೀಡಿರುವ ರಾಜಕೀಯ ಸ್ವಾತಂತ್ರ್ಯವನ್ನು ರಾಮರಾಜ್ಯವಾಗಿ ಪರಿವರ್ತನೆ ಮಾಡುವ ಅಗತ್ಯವಿದೆ ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿದೇವಿ ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ವಿನೀತ್‌ ರಾವ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸುಚೀತ್‌ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.