ADVERTISEMENT

ಮರಾಠರ ಸಂಪ್ರದಾಯ ಉಳಿಸಿ–ಬೆಳೆಸಿ

ಹೆಬ್ರಿಯ ಮರಾಠಿ ಸಮುದಾಯದ ಸಮಾವೇಶದಲ್ಲಿ ಜಯಪ್ರಕಾಶ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:57 IST
Last Updated 7 ಫೆಬ್ರುವರಿ 2023, 4:57 IST
ಹೆಬ್ರಿ ವಲಯದ ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಮರಾಠಿ ಸಮಾವೇಶ ಹಾಗೂ ಛತ್ರಪತಿ ಶಿವಾಜಿ ಜಯಂತಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಉದ್ಘಾಟಿಸಿದರು
ಹೆಬ್ರಿ ವಲಯದ ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಮರಾಠಿ ಸಮಾವೇಶ ಹಾಗೂ ಛತ್ರಪತಿ ಶಿವಾಜಿ ಜಯಂತಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಉದ್ಘಾಟಿಸಿದರು   

ಹೆಬ್ರಿ: ಮಕ್ಕಳಿಗೆ ಹಕ್ಕುಗಳ ಜೊತೆಗೆ ಕರ್ತವ್ಯವನ್ನು ತಿಳಿಸಬೇಕು. ಮೀಸಲಾತಿಯ ಪ್ರಯೋಜನ ಪಡೆಯಬೇಕಾದರೆ ಶಿಕ್ಷಣವನ್ನು ಮೊಟಕುಗೊಳಿಸದೆ ಜವಾಬ್ದಾರಿ ಎಂದು ಭಾವಿಸಿ, ಶಿಕ್ಷಣ ಕೊಡಿಸಬೇಕು. ಅತ್ಯಂತ ಶ್ರೀಮಂತ ಸಂಸ್ಕೃತಿ ಇರುವ ಮರಾಠ ಸಂಪ್ರದಾಯವನ್ನು ಉಳಿಸುವ ತಿಳಿವಳಿಕೆಯೊಂದಿಗೆ ನೈತಿಕ ಶಿಕ್ಷಣವನ್ನು ನೀಡಿ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.

ಹೆಬ್ರಿ ವಲಯದ ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಮರಾಠಿ ಸಮಾವೇಶ ಹಾಗೂ ಛತ್ರಪತಿ ಶಿವಾಜಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಮರಾಠಿ ಸಮುದಾಯದ ಜನರಿಗೆ ತರಬೇತಿಯ ಕೊರತೆ ಇದೆ. ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆ, ಮೀಸಲಾತಿ, ವ್ಯಕ್ತಿತ್ವ ವಿಕಸನದ ಬಗ್ಗೆ ಸೂಕ್ತ ತರಬೇತಿಯ ಅಗತ್ಯವಿದೆ. ಮೀಸಲಾತಿ ಕಾರಣದಿಂದ ಸಂವಿಧಾನದ ಶ್ರೇಷ್ಠ ಹುದ್ದೆಗಳನ್ನು ಏರಲು ಸಾಧ್ಯವಾಯಿತು. ಸೂಕ್ತ ತರಬೇತಿಯೊಂದಿಗೆ ಸಮುದಾಯಕ್ಕೆ ಮೀಸಲಿರುವ ಹುದ್ದೆಗಳು ಭರ್ತಿಯಾಗಲಿ ಎಂದು ಜಯಪ್ರಕಾಶ ಹೆಗ್ಡೆ ಆಶಿಸಿದರು.

ADVERTISEMENT

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ಕೃಷಿಯನ್ನು ಶ್ರೇಷ್ಠ ಎಂದು ಪರಿಗಣಿಸಿ ಪೋಷಿಸಿದವರು ಮರಾಠಿ ಸಮಾಜದವರು. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳನ್ನು ಮರಾಠಿ ಸಮುದಾಯ ಮುನ್ನಡೆಸಿಕೊಂಡು ಬಂದಿದೆ. ಸಚಿವ ಸುನಿಲ್ ಕುಮಾರ್, ಮರಾಠಿ ಸಮುದಾಯದ ಸಭಾಭವನದ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹50 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸುವರು ಎಂದರು.

ಹೆಬ್ರಿ ವಲಯ ಮರಾಠಿ ಸೇವಾ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮೀಸಲಾತಿಯಲ್ಲಿ ದೋಷ ಲೋಪಗಳಿದ್ದು, ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕು. ಕೃಷಿ ಹಾಗೂ ವ್ಯವಹಾರ ಮಾಡಲು ಬ್ಯಾಂಕ್ ಸಾಲ ಪಡೆಯಲು ಇರುವ ತೊಂದರೆಗಳು ನಿವಾರಣೆ ಆಗಬೇಕಾಗಿದೆ ಎಂದರು.

ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಮಹಾಸಭೆ, ಸನ್ಮಾನ ನಡೆಯಿತು. ತಾಣ ಅರ್ಧನಾರೀಶ್ವರ ದೇವಸ್ಥಾನದಿಂದ ಶೋಭಾಯಾತ್ರೆ, ಪುರ ಮೆರವಣಿಗೆ, ಬೈಕ್ ರ್‍ಯಾಲಿ, ಸಮೂಹ ಜಾನಪದ ನೃತ್ಯ ಜರುಗಿತು.

ಉಡುಪಿ ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ಉಮೇಶ ನಾಯ್ಕ, ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕು ಮರಾಠಿ ಸೇವಾ ಸಂಘದ ಅಧ್ಯಕ್ಷ ಶಂಕರ ನಾಯ್ಕ, ಚಾರ ಪಂಚಾಯತಿ ಉಪಾಧ್ಯಕ್ಷೆ ಜಯಲಕ್ಷ್ಮಿ ನಾಯ್ಕ, ಮರಾಠಿ ಸಮಾಜದ ಪ್ರಮುಖರಾದ ಜಯರಾಮ ನಾಯ್ಕ, ಪಾಂಡುರಂಗ ನಾಯ್ಕ, ದಿನಕರ ನಾಯ್ಕ, ಶೇಖರ ನಾಯ್ಕ, ಸಂಜೀವ ನಾಯ್ಕ, ಸುಗಂಧಿ ನಾಯ್ಕ, ಮಮತಾ ನಾಯ್ಕ, ಶಂಕರ ನಾಯ್ಕ, ಕರುಣಾಕರ ನಾಯ್ಕ ಇದ್ದರು.

ಮಹೇಶ ನಾಯ್ಕ ನಿರೂಪಿಸಿದರು. ಸಂಜೀವ ನಾಯ್ಕ ಸ್ವಾಗತಿಸಿದರು. ಸತೀಶ್ ನಾಯ್ಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.