ADVERTISEMENT

ಹೊಸೇರಿ ಜನವಸತಿ ಪ್ರದೇಶದ ತೀರದ ಬವಣೆ; ಸೇತುವೆ ಮರೀಚಿಕೆ

ಮಳೆಗಾಲವೆಂದರೆ ಈ ಜನರಿಗೆ ನಡುಕ

​ಪ್ರಜಾವಾಣಿ ವಾರ್ತೆ
Published 11 ಮೇ 2021, 5:11 IST
Last Updated 11 ಮೇ 2021, 5:11 IST
ಹಳ್ಳದ ಕಾಲುಸಂಕ ದಾಟಲು ಮುಂದಾಗಿರುವ ಶಾಲಾ ಮಕ್ಕಳು (ಸಂಗ್ರಹ ಚಿತ್ರ)
ಹಳ್ಳದ ಕಾಲುಸಂಕ ದಾಟಲು ಮುಂದಾಗಿರುವ ಶಾಲಾ ಮಕ್ಕಳು (ಸಂಗ್ರಹ ಚಿತ್ರ)   

ಬೈಂದೂರು: ತಾಲ್ಲೂಕಿನ ಗೋಳಿಹೊಳೆ ಗ್ರಾಮದ ಹೊಸೇರಿ ಜನವಸತಿ ಪ್ರದೇಶದ ನಿವಾಸಿಗಳಿಗೆ ಮಳೆಗಾಲ ಸಮೀಪಿಸುತ್ತಿದ್ದಂತೆ ನಡುಕ ಆರಂಭವಾಗುತ್ತದೆ. ಮಳೆಗಾಲದಲ್ಲಿ ಜೀವಭಯ ಕಾಡುತ್ತದೆ. ಅದಕ್ಕೆ ಕಾರಣ ಈ ಪ್ರದೇಶವನ್ನು ಗ್ರಾಮದ ಮುಖ್ಯಭಾಗದಿಂದ ಬೇರ್ಪಡಿಸುವ ಗುಳ್ನಾಡಿ ಹಳ್ಳ.

ಹೊಸೇರಿಯ ಸುಮಾರು 50 ಕುಟುಂಬಗಳಲ್ಲಿ ಕೃಷಿಕರು ಮತ್ತು ಕೃಷಿ ಕೂಲಿಕಾರರು ಹೆಚ್ಚಿನವರಿದ್ದಾರೆ. ಇಲ್ಲಿನ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲ ಜನರು ತಮ್ಮೆಲ್ಲ ಅಗತ್ಯಗಳಿಗೆ ಗುಳ್ನಾಡಿ ಹಳ್ಳ ದಾಟಿ ವಸ್ರೆ ಎಂಬ ಇನ್ನೊಂದು ಜನವಸತಿ ಪ್ರದೇಶದ ಮೂಲಕ ಯಳಜಿತ ಅಥವಾ ಅನ್ಯ ಊರುಗಳಿಗೆ ಹೋಗಬೇಕು. ಈ ಹಳ್ಳ 20 ಅಡಿ ಅಗಲ, 10 ಅಡಿ ಆಳ ಇದೆ. ಬೇಸಿಗೆಯಲ್ಲಿ ಅದರಲ್ಲಿ ಇಳಿದು ಹೋಗಬಹುದು. ಮಲೆನಾಡಿನ ಭೂ ಸ್ವರೂಪವನ್ನು ಹೋಲುವ ಹೊಸೇರಿಯಲ್ಲಿ, ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುತ್ತದೆ. ಅದನ್ನು ದಾಟಲು ಎಷ್ಟೋ ವರ್ಷಗಳಿಂದ ಜನರೇ ಮರದ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಕಾಲಿಡುವಷ್ಟೇ ಕಿರಿದಾಗಿರುವ ಸಂಕದ ಮೇಲೆ ತುಸು ಎಡವಿದರೂ, ಹಳ್ಳಕ್ಕೆ ಬಿದ್ದ ವ್ಯಕ್ತಿ ಬದುಕುಳಿಯುವುದಿಲ್ಲ. ಒಂದು ಕಡೆ ಆಧಾರಕ್ಕೆ ಕಟ್ಟಿಕೊಂಡ ಹಿಡಿಗಳದ ಮೇಲೆ ಧೈರ್ಯಹಾಕಿ ನಡೆದಾಡಬೇಕು. ಅಧಿಕ ಮಳೆಯಾದೊಡನೆ ಹಳ್ಳದಲ್ಲಿ ಪ್ರವಾಹ ಬಂದು ಕಾಲುಸಂಕ ಮುಳುಗಿ, ಸಂಪರ್ಕ ಕಡಿದುಹೋಗುತ್ತದೆ. ಕಾಲು ಸಂಕ ಶಿಥಿಲವಾದೊಡನೆ ಇನ್ನೊಂದನ್ನು ನಿರ್ಮಿಸಿಕೊಳ್ಳಬೇಕು. ಇಂತಹ ಒಂದು ಕಾಲುಸಂಕ ಬಳಸಿ ಹೊಸೇರಿಯ ಅದೆಷ್ಟೋ ತಲೆಮಾರಿನ ಜನ ಬದುಕಿ ಬಂದಿದ್ದಾರೆ ಎನ್ನುತ್ತಾರೆ ಸ್ಥಳೀಯರು.

‘ಈ ಹಳ್ಳಕ್ಕೆ ಶಾಶ್ವತ ಸೇತುವೆ ನಿರ್ಮಿಸಿಕೊಡಿ ಎಂದು ಅದೆಷ್ಟೋ ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬರಲಾಗಿದೆ. ಆಶ್ವಾಸನೆಯೊಂದೇ ಅದಕ್ಕೆ ಸಿಕ್ಕಿರುವ ಫಲ’ ಎಂದು ಸ್ಥಳೀಯರಾದ ಮಂಜುನಾಥ ಮರಾಠಿ ವಿಷಾದದಿಂದ ಹೇಳುತ್ತಾರೆ. ‘ನಿಧಿಯ ಕೊರತೆಯಿಂದ ಗ್ರಾಮ ಪಂಚಾಯಿತಿ ಇದನ್ನು ಮಾಡಲಾರದು. ಮೇಲಿನ ಸ್ತರದ ಜನಪ್ರತಿನಿಧಿಗಳಿಗೆ ಹೊಸೇರಿ ಜನರ ಯಾತನಾಮಯ ಬದುಕಿನ ನೋವು, ಸಂಕಟ ತಟ್ಟಿಲ್ಲ. ಈಚೆಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ನಮ್ಮ ಬವಣೆ ನೀಗುವತ್ತ ಹೆಜ್ಜೆ ಇಟ್ಟಿದ್ದಾರೆ ಎಂದು ಕೇಳಿದ್ದೇನೆ’ ಎನ್ನುತ್ತಾರೆ ಅವರು.

ADVERTISEMENT

‘₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣ’

ಸದ್ಯ ಸೇತುವೆ ಮತ್ತು ಕಾಲುಸಂಕ ರಚನೆಗೆ ಅನುದಾನದ ಕೊರತೆ ಇದೆ. ಶೀಘ್ರ ಮಂಜೂರು ಆಗದು. ಆದ್ದರಿಂದ ಪಶ್ಚಿಮ ವಾಹಿನಿ ಯೋಜನೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟೆ ಸಹಿತ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕೆ ಈಗಾಗಲೇ ಅನುದಾನ ಮೀಸಲಿರಿಸಿದ್ದು, ಮುಂದಿನ ಜನವರಿ-ಫೆಬ್ರುವರಿ ವೇಳೆಗೆಕಾಮಗಾರಿ ಆರಂಭವಾಗಿ, ಬೇಸಿಗೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಕೃಷಿ ಹಾಗೂ ಜನರ ಸಂಚಾರ ಎರಡಕ್ಕೂ ಅನುಕೂಲವಾಗಲಿದೆ. ಅಲ್ಲಿನ ನಿವಾಸಿಗಳ ಬವಣೆ ಶಾಶ್ವತವಾಗಿ ದೂರಾಗಲಿದೆ ಎಂದು ಶಾಸಕಬಿ. ಎಂ ಸುಕುಮಾರ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.