ADVERTISEMENT

ಕೊರೊನಾ ಭೀತಿ: ಶವ ಪಡೆಯಲು ಹಿಂದೇಟು

ಜಿಲ್ಲಾ ನಾಗರಿಕ ಸಮಿತಿಯಿಂದ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 10:31 IST
Last Updated 3 ಏಪ್ರಿಲ್ 2020, 10:31 IST

ಉಡುಪಿ: ಕೊರೊನಾ ಭೀತಿಯಿಂದ ವೃದ್ಧನ ಅಂತ್ಯಸಂಸ್ಕಾರ ನಡೆಸಲು ಸಂಬಂಧಿಗಳು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲಾ ನಾಗರಿಕ ಸಮಿತಿಯಿಂದ ವೃದ್ಧನ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ.

ಸಿದ್ದಾಪುರದ ಕಮಲಶಿಲೆಯ ನಿವಾಸಿ ಮಂಜುವೀರ (80) ಜಿಲ್ಲಾ ಆಸ್ಪತ್ರೆಯಲ್ಲಿ 2 ತಿಂಗಳಿನಿಂದ ಒಳರೋಗಿಯಾಗಿ ದಾಖಲಾಗಿದ್ದರು. ಈಚೆಗೆ ಕೊರೊನಾ ಸೋಂಕು ವ್ಯಾಪಕವಾದ ಹಿನ್ನೆಲೆಯಲ್ಲಿ ವೃದ್ಧನನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿತ್ತು.

ನಿಷೇಧಾಜ್ಞೆ ಇದ್ದ ಕಾರಣ ಊರಿಗೆ ತೆರಳಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನನ್ನು ಹೂಡೆಯ ವೃದ್ಧಾಶ್ರಮಕ್ಕೆ ದಾಖಲಿಸಲಾಗಿತ್ತು. ಕೆಲವು ದಿನಗಳ ಬಳಿಕ ಅನಾರೋಗ್ಯ ಉಲ್ಬಣಿಸಿ ಅವರು ಮೃತಪಟ್ಟಿದ್ದರು. ಶವವನ್ನು ಕೊಂಡೊಯ್ಯುವಂತೆ ವೃದ್ಧಾಶ್ರಮದ ಸಿಬ್ಬಂದಿ ಸಂಬಂಧಿಗಳಿಗೆ ತಿಳಿಸಿದರೂ, ಕೊರೊನಾ ಹರಡುವ ಭಯದಿಂದ ಯಾರೂ ಶವ ತೆಗೆದುಕೊಂಡು ಹೋಗಲು ಬರಲಿಲ್ಲ ಎನ್ನಲಾಗಿದೆ.

ADVERTISEMENT

ಈ ವಿಷಯ ತಿಳಿದು ಮೃತ ವ್ಯಕ್ತಿಯ ಮಗನನ್ನು ಪತ್ತೆಮಾಡಿ ಕರೆಸಿಕೊಂಡು ಮಾರ್ಚ್‌ 30ರಂದು ಇಂದ್ರಾಳಿಯ ಹಿಂದೂ ರುದ್ರಭೂಮಿಯಲ್ಲಿ ಈಚೆಗೆ ಶವಸಂಸ್ಕಾರ ನೆರವೇರಿಸಲಾಯಿತು. ಅಂತ್ಯ ಸಂಸ್ಕಾರಕ್ಕೆ ತಗುಲಿದ ವೆಚ್ಚವನ್ನು ನಾಗರಿಕ ಸಮಿತಿಯಿಂದ ಭರಿಸಲಾಯಿತು ಎಂದು ಸಮಿತಿಯ ನಿತ್ಯಾನಂದ ಒಳಕಾಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.