ADVERTISEMENT

ಮಳೆಯ ಮಧ್ಯೆಯೂ ಮೇರೆ ಮೀರಿದ ಸಂಭ್ರಮ

ಬೀಡಿನ ಗುಡ್ಡೆ ರಂಗಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 15:11 IST
Last Updated 15 ಆಗಸ್ಟ್ 2019, 15:11 IST
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಗುರುವಾರ ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಗುರುವಾರ ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದರು.   

ಉಡುಪಿ: ಗುರುವಾರ ಬೆಳಿಗ್ಗಿನಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಸ್ವಾತಂತ್ರ್ಯೋವದ ಸಂಭ್ರಮ ಮಾತ್ರ ಕರಗಲಿಲ್ಲ. ಬೀಡಿನಗುಡ್ಡೆ ಮಹಾತ್ಮಾಗಾಂಧಿ ಬಯಲು ರಂಗಮಂದಿರಲ್ಲಿ ಬೆಳಿಗ್ಗೆ 9ಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಧ್ವಜಾರೋಹಣ ನೆರವೇರಿಸಿದರು.

ಕುಂದದ ಉತ್ಸಾಹ:ಧ್ವಜಾರೋಹಣದ ಬಳಿಕ ಜಿಲ್ಲಾಧಿಕಾರಿ ಜೀಪ್‌ ಏರಿ ಮಳೆಯಲ್ಲಿ ನೆನೆಯುತ್ತಲೇ ಗೌರವ ರಕ್ಷೆ ಸ್ವೀಕರಿಸಿದರು. ಈ ಸಂದರ್ಭಸ್ಕೌಟ್ಸ್‌ ಹಾಗೂ ಗೈಡ್ಸ್‌, ಎನ್‌ಸಿಸಿ, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಪೊಲೀಸ್ ತಂಡ, ಡಿಎಆರ್, ಅಗ್ನಿಶಾಮಕ ದಳದ ತಂಡ ಶಿಸ್ತಿನಿಂದ ಜಿಲ್ಲಾಧಿಕಾರಿಗೆ ಗೌರವ ರಕ್ಷೆ ಸಲ್ಲಿಸಿತು.

ಬಳಿಕ ನಡೆದ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ಪೊಲೀಸ್ ತಂಡ ಶಿಸ್ತುಬದ್ಧವಾಗಿ ಹೆಜ್ಜೆಹಾಕಿತು. ವಿದ್ಯಾರ್ಥಿಗಳ ತಂಡದ ಪಥ ಸಂಚಲನ ಕೂಡ ಮೆಚ್ಚುಗೆಗೆ ಪಾತ್ರವಾಯಿತು.

ADVERTISEMENT

ಬಳಿಕ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಜಿಲ್ಲಾಧಿಕಾರಿ ಸ್ವಾತಂತ್ರ್ಯಕ್ಕಾಗಿ ಮಡಿದವರನ್ನು ಸ್ಮರಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿದ ತುಳುವರಾಣಿ ಅಬ್ಬಕ್ಕನ ಸಾಹಸವನ್ನು ಬಣ್ಣಿಸಿದರು. ಜತೆಗೆ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಾಡಿ, ಮಲ್ಲಮ್ಮ, ಝಾನ್ಸಿ ಲಕ್ಷ್ಮೀಬಾಯಿ, ಸರೋಜಿನಿ ನಾಯ್ಡು ಸೇರಿದಂತೆ ಹಲವರು ಮಹನೀಯರ ಹೋರಾಟವನ್ನು ಸ್ಮರಿಸಿದರು.

97 ವರ್ಷಗಳ ಹಿಂದೆ 1921ರಲ್ಲಿ ಉಡುಪಿಯಲ್ಲಿ ಆರ್‌.ಎಸ್‌.ಶೆಣೈ ನೇತೃತ್ವದಲ್ಲಿ ಜಲಿಯನ್ ವಾಲಾಬಾಗ್ ದಿನಾಚರಣೆ, ಮುಕುಂದ ಪೈಗಳ ನಿವಾಸದಲ್ಲಿ ಸ್ವಾತಂತ್ರ್ಯದ ಹೋರಾಟಗಳು, ಕೃಷ್ಣಮಠದ ರಥಬೀದಿಯಲ್ಲಿ ನಡೆಯುತ್ತಿದ್ದ ಸಾರ್ವಜನಿಕರ ಸಭೆ, ನಾಟಕಗಳ ಕುರಿತು ತಿಳಿಸಿದರು.

1927ರಲ್ಲಿ ಮಹಾತ್ಮಾಗಾಂಧೀಜಿ ಖಾದಿ ಪ್ರಚಾರಕ್ಕಾಗಿ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರದಲ್ಲಿ ಭಾಷಣ ಮಾಡಿದ್ದರು. 1930ರಲ್ಲಿ ಕಾಪು, ಕಟಪಾಡಿ, ಕುಂದಾಪುರದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು. 1934ರಲ್ಲಿ ಅಸ್ಪೃಶ್ಯತಾ ವಿರೋಧಿ ಚಳವಳಿಗಾಗಿ ಗಾಂಧೀಜಿ ಉಡುಪಿ, ಕಟಪಾಡಿ, ಬ್ರಹ್ಮಾವರ, ಕುಂದಾಪುರದಲ್ಲಿ ಭಾಷಣ ಮಾಡಿದ್ದರು ಎಂದರು.

ಶ್ರೇಷ್ಠ ಸಾಹಿತಿ ಡಾ.ಶಿವರಾಮ ಕಾರಂತರ ಸಾಹಿತ್ಯ ಕೃಷಿ ಹಾಗೂ ಸ್ವಾತಂತ್ರ್ಯ ಚಳವಳಿಗೆ ನೀಡಿದ ಸಹಕಾರ, ಕರಾವಳಿಯಲ್ಲಿ ಮೊಳಕೆಯೊಡೆದ ನಾರಾಯಣ ಗುರುಗಳ ಚಿಂತನೆಗಳು ಎಲ್ಲರಿಗೂ ದಾರಿದೀಪವಾಗಲಿ ಎಂದರು.‌

ಜಿಲ್ಲೆಯ ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದು, ನೈಸರ್ಗಿಕ ಬಂದರು, ಸೇಂಟ್ ಮೇರಿಸ್ ದ್ವೀಪ, ಶ್ರೀಕೃಷ್ಣಮಠ, ಉಡುಪಿ ಮಲ್ಲಿಗೆ, ಕಾರ್ಕಳದ ಜೈನ ಬಸದಿ, ಗೊಮ್ಮಟೇಶ್ವರನ ಮೂರ್ತಿ, ಬ್ಯಾಂಕಿಂಗ್ ವಲಯ ಹುಟ್ಟಿದ ಬಗೆಯನ್ನು ವಿವರಿಸಿದರು.

ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಜಲವರ್ಷ ಕಾರ್ಯಕ್ರಮದಡಿ ಹಸಿರೀಕರಣಕ್ಕೆ ಒತ್ತು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಳೆನೀರು ಸಂಗ್ರಹಕ್ಕೆ ಆದ್ಯತೆ, ಕೆರೆಗಳ ಪುನಶ್ಚೇತನಕ್ಕೆ ಗಮನ ಕೊಡಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕ ರಘುಪತಿ ಭಟ್‌, ಎಡಿಸಿ ವಿದ್ಯಾಕುಮಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧೂ ಬಿ.ರೂಪೇಶ್‌, ಎಸ್‌ಪಿ ನಿಶಾ ಜೇಮ್ಸ್‌, ಎಎಸ್‌ಪಿ ಕುಮಾರಚಂದ್ರ, ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.