ADVERTISEMENT

ಕರಂಬಳ್ಳಿ ದೇವಸ್ಥಾನದ ಅನ್ನಛತ್ರಕ್ಕೆ ₹ 4 ಕೋಟಿ

ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:51 IST
Last Updated 19 ಜನವರಿ 2021, 2:51 IST

ಉಡುಪಿ: ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ದಿ.ವಿ.ಎಸ್‌. ಆಚಾರ್ಯ ಅವರ ಹೆಸರಿನಲ್ಲಿ ಯಾತ್ರಾತ್ರಿಗಳ ಅನುಕೂಲಕ್ಕೆ ಅನ್ನಛತ್ರ ನಿರ್ಮಾಣ ಮಾಡಲು ಸರ್ಕಾರಿಂದ ₹ 4 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಕರಂಬಳ್ಳಿಯ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳಲ್ಲಿ ದೇವಸ್ಥಾನಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಭಕ್ತರ ನೆರವಿನೊಂದಿಗೆ ಅನ್ನಛತ್ರ ಸುಂದರ ಹಾಗೂ ಸುಸಜ್ಜಿತವಾಗಿ ನಿರ್ಮಾಣವಾಗಲಿ ಎಂದು ಆಶಿಸಿದರು.

ರಾಜಕೀಯ ಜಂಟಾಟಗಳಿಂದ ಅಲ್ಪ ವಿರಾಮ ಪಡೆಯಲು ಉಡುಪಿಯಲ್ಲಿ ದೇವರ ಪೂಜೆಯಲ್ಲಿ ಭಾಗವಹಿಸಲು ಬಂದಿದ್ದೇನೆ. ಮನಸ್ಸಿಗೆ ನೆಮ್ಮದಿ, ಶಾಂತಿ ಇದ್ದರೆ ಆಡಳಿತವನ್ನು ಸುಗಮವಾಗಿ ಮುನ್ನಡೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂದು ಯಡಿಯೂರಪ್ಪ ಅವರು ರಾಜಕೀಯ ವಿದ್ಯಮಾನಗಳ ಕುರಿತು ಬೇಸರ ವ್ಯಕ್ತಪಡಿಸಿದರು.

ADVERTISEMENT

ಧರ್ಮ, ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳು ಜಗತ್ತಿನಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದು, ದೇಶದಲ್ಲಿ ಸಾಧು ಸಂತರು ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಞೆ, ಸಮಾಜ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ತೊಡಗಿದಿದ್ದಾರೆ ಎಂದರು.

ಕೃಷ್ಣ ಹಾಗೂ ವೆಂಕಟ ರಮಣನ ನಾಡಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಗೋಹತ್ಯೆ ನಿಷೇಧ ಕಾನೂನು ಜಾರಿ ಘೋಷಣೆ ಮಾಡಿದ್ದು ಸಂತಸ ತಂದಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಸಂಸದೀಯ ಕಾರ್ಯದರ್ಶಿ ಜೀವರಾಜ್‌, ಶಾಸಕ ರಘುಪತಿ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.