ADVERTISEMENT

ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿ

ಯೋಗ ಶಿಬಿರದಲ್ಲಿ ಬಾಬಾ ರಾಮ್‌ದೇವ್‌ ಆಶಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 12:25 IST
Last Updated 20 ನವೆಂಬರ್ 2019, 12:25 IST
ಯೋಗಶಿಬಿರದ ಕೊನೆಯ ದಿನವಾದ ಬುಧವಾರ ಪಲಿಮಾರು ಹಾಗೂ ಕೃಷ್ಣಮಠದಿಂದ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಸನ್ಮಾನಿಸಲಾಯಿತು.
ಯೋಗಶಿಬಿರದ ಕೊನೆಯ ದಿನವಾದ ಬುಧವಾರ ಪಲಿಮಾರು ಹಾಗೂ ಕೃಷ್ಣಮಠದಿಂದ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಸನ್ಮಾನಿಸಲಾಯಿತು.   

ಉಡುಪಿ: ಒಂದೇ ದೇಶ, ಒಂದೇ ಕಾನೂನು ಜಾರಿಗೆ ಅಂಬೇಡ್ಕರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಅವರ ಆಶಯದಂತೆ ದೇಶದಲ್ಲಿ ಶೀಘ್ರ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ದೇಶಕ್ಕೆ ಎರೆಡೆರಡು ಕಾನೂನುಗಳು ಅಗತ್ಯವಿಲ್ಲ ಎಂದು ಯೋಗಗುರು ಬಾಬಾ ರಾಮ್‌ದೇವ್‌ ಹೇಳಿದರು.

ಬುಧವಾರ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಯೋಗ ಶಿಬಿರದಲ್ಲಿ ಮಾತನಾಡಿದ ಅವರು, ಸಂತ ಸಮಾವೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, ಗೋ ಹತ್ಯೆ ನಿಷೇಧ, ಜನಸಂಖ್ಯೆ ಏರಿಕೆ ನಿಯಂತ್ರಣದ ನಿರ್ಣಯಗಳನ್ನು ಸಂತರು ತೆಗೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತರ ಆಶಯವನ್ನು ತಿಳಿಸಲಾಗುವುದು ಎಂದರು.

ಶಾಖಾಹಾರವೇ ಶ್ರೇಷ್ಠ:ಮನುಷ್ಯನಿಗೆ ಬದುಕುವ ಹಕ್ಕಿರುವಂತೆ, ಗೋವಿಗೂ ಬದುಕುವ ಹಕ್ಕಿದೆ. ಹಾಗಾಗಿ, ಗೋಮಾಂಸ ಸೇವನೆ ತ್ಯಜಿಸಿ, ಸಾತ್ವಿಕಸಸ್ಯಾಹಾರ ಸೇವಿಸಬೇಕು. ದೇಶದಲ್ಲಿ ಗೋಹತ್ಯೆ ಸಂಪೂರ್ಣವಾಗಿ ನಿಷಿದ್ಧವಾಗಬೇಕು ಎಂದರು.

ADVERTISEMENT

ಜನಸಂಖ್ಯೆ ನಿಯಂತ್ರಣ ಅಗತ್ಯ:ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ನಿಯಮಗಳ ಜಾರಿ ಅಗತ್ಯ. ಹೆಚ್ಚು ಮಕ್ಕಳನ್ನು ಹೆತ್ತರೆ ಪೋಷಕರ ಮತದಾನದ ಹಕ್ಕನ್ನು ಕಸಿಯಬೇಕು. ಸರ್ಕಾರಿ ನೌಕರಿ ಸಿಗದಂತೆ, ಚುನಾವಣೆಗೆ ಸ್ಪರ್ಧಿಸದಂತೆ ಕಠಿಣ ನಿಯಮಗಳನ್ನು ರೂಪಿಸಬೇಕಾದ ಅಗತ್ಯತೆ ಇದೆ ಎಂದು ಬಾಬಾ ರಾಮ್‌ದೇವ್ ಹೇಳಿದರು.

ಅನ್ನ ಬೇಡ: ತರಕಾರಿ ಸೇವಿಸಿ:ಸ್ವಸ್ಥ ಆರೋಗ್ಯ ಹೊಂದಬೇಕಾದರೆ ಅನ್ನ ಹಾಗೂ ಧಾನ್ಯಗಳ ಸೇವನೆಯನ್ನು ತ್ಯಜಿಸಬೇಕು. ಮಾಂಸಾಹಾರ ಒಳ್ಳೆಯದಲ್ಲ. ಸಿಹಿ ಪದಾರ್ಥಗಳ ಬಳಕೆಯೂ ಬೇಡ. ಬದಲಾಗಿ, ತರಕಾರಿ, ಹಣ್ಣುಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು. ದೇಹದ ತೂಕವೂ ಇಳಿಯುತ್ತದೆ ಎಂದು ಆರೋಗ್ಯದ ಟಿಪ್ಸ್‌ ನೀಡಿದರು.

ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಲಿ:ದಿನನಿತ್ಯದ ಅಗತ್ಯತೆಗಳಿಗೆ ವಿದೇಶಿ ಬ್ರಾಂಡ್‌ಗಳ ಬಳಕೆಯ ಬದಲಾಗಿ, ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಬೇಕು. ಕೆಮಿಕಲ್‌ ವಸ್ತುಗಳ ಬದಲಾಗಿ, ಆಯುರ್ವೇದ ಉತ್ಪನ್ನಗಳನ್ನು ಬಳಸಬೇಕು. ದೇಶದ ಅಭಿವೃದ್ಧಿಗೆ ಸ್ವದೇಶಿ ವಸ್ತುಗಳ ಬಳಕೆ ಅಗತ್ಯ ಎಂದು ಪ್ರತಿಪಾದಿಸಿದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ‘ತುಳಸಿದಳಕ್ಕೆ ವಿಕಿರಣ ತಡೆಯುವ ಶಕ್ತಿ ಇದೆ ಎಂಬಬಾಬಾ ರಾಮ್‌ದೇವ್ ಹೇಳಿಕೆ ಮಾಧ್ಯಮಗಳಲ್ಲಿ ಚರ್ಚೆ ಹಾಗೂ ಟೀಕೆಗೊಳಗಾಯಿತು. ಆದರೆ, ಕೃಷ್ಣಮಠದಲ್ಲಿ 2 ವರ್ಷಗಳಿಂದ ಕೃಷ್ಣನಿಗೆ ಲಕ್ಷ ತುಳಸಿ ದಳಗಳ ಸಮರ್ಪಣೆ ನಡೆಯುತ್ತಿದೆ. ಈ ಅವಧಿಯಲ್ಲಿ ಮಠದಲ್ಲಿ ಜಗಳ, ಕಲಹದಂತಹ ಋಣಾತ್ಮಕ ವಿಚಾರಗಳು ನಡೆದಿಲ್ಲ. ಇದು ತುಳಸಿಗಿರುವ ಶಕ್ತಿ’ ಎಂದರು.

ಮನೆಯಲ್ಲಿ ತುಳಸಿ ಗಿಡ ಬೆಳೆಸಿದರೆ, ಋಣಾತ್ಮಕತೆ ದೂರವಾಗಿ ಶಾಂತಿ, ಸಮೃದ್ಧಿ ನೆಲೆಸಲಿದೆ. ಪ್ರತಿದಿನ ಕನಿಷ್ಠ ಒಂದು ತಾಸು ಯೋಗಕ್ಕೆ ಸಮಯ ಮೀಸಲಿಟ್ಟರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಐದು ದಿನಗಳ ಯೋಗ ಶಿಬಿರದಲ್ಲಿ ಸಾವಿರಾರು ಮಂದಿ ಯೋಗದ ಮಹತ್ವ ಅರಿತಿದ್ದಾರೆ. ಯೋಗಮಯ ಜೀವನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಮಠದಿಂದ ಬಾಬಾ ರಾಮ್‌ದೇವ್ ಅವರಿಗೆ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.