ADVERTISEMENT

ಮನೆಯಲ್ಲಿದ್ದು ಕೊರೊನಾ ವಿರುದ್ಧ ಹೋರಾಡೋಣ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 15:37 IST
Last Updated 4 ಏಪ್ರಿಲ್ 2020, 15:37 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ಉಡುಪಿ: ಕೊರೊನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಜನರಿಗೆ ಸಂದೇಶ ನೀಡಿದ್ದಾರೆ.

ಶ್ರೀಗಳ ಸಂದೇಶ:

ಕಣ್ಣಿಗೆ ಕಾಣದ ಕೊರೊನಾ ವೈರಸ್‌ ಪ್ರಜೆಗಳ ಅಸ್ತಿತ್ವದ ಬುನಾದಿಯನ್ನೇ ಅಲುಗಾಡಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸೋಂಕು ಆರಂಭದಲ್ಲಿ ಸಾಂಕ್ರಮಿಕ ರೋಗ ಎಂದು ತಾತ್ಸಾರ ಮಾಡಿದ ಹಲವು ದೇಶಗಳಲ್ಲಿ ಸಾವಿರಾರು ಜನರ ಸಾವು ಸಂಭವಿಸಿದೆ. ಲೆಕ್ಕವಿಲ್ಲದಷ್ಟು ಜನರಿಗೆ ಸೋಂಕು ತಗುಲಿ ಸಾವಿನ ಮನೆಯ ಬಾಗಿಲು ಬಡಿಯುವಂತಾಗಿರುವುದು ದುರ್ದೈವದ ಸಂಗತಿ.

ADVERTISEMENT

ಆಧ್ಯಾತ್ಮಿಕ ದೇಶವಾದ ಭಾರತದಲ್ಲೂ ಕೊರೊನಾ ಆಟ ಪ್ರಾರಂಭಿಸಿಯಾಗಿದೆ. ನಾವು ಈ ಮಹಾಮಾರಿಯನ್ನು ಹಗುರವಾಗಿ ಪರಿಗಣಿಸಬಾರದು. ತಾತ್ಸಾರ ತೋರಿದರೆ ಭಯಂಕರ ಪರಿಣಾಮ ಎದುರಿಸಬೇಕಾಗುತ್ತದೆ. 138 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಕೊರೊನಾ ನಿಯಂತ್ರಣ ಊಹಾತೀತವಾದ ವಿಚಾರ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಲಾಕ್‌ಡೌನ್ ಮಾಡಿರುವುದು ಸ್ವಾಗತಾರ್ಹ ನಿರ್ಧಾರ.

ಲಾಕ್‌ಡೌನ್‌ ಎಲ್ಲರ ಯೋಗಕ್ಷೇಮಕ್ಕೆ ತೆಗೆದುಕೊಂಡಿರುವ ಕ್ರಮ. ನಾವೆಲ್ಲರೂ ಸ್ವಯಂ ಸೈನಿಕರಂತೆ ಸರ್ಕಾರದ ಸೂಚನೆಗಳನ್ನು ಪಾಲಿಸೋಣ. ಇದರಿಂದ ಕೊರೊನಾ ಮಹಾಮಾರಿ ಓಡಿಸಲು ಸಾಧ್ಯವಾಗಲಿದೆ. ಒಣಜಂಬದಿಂದ ಅಡ್ಡಾದಿಡ್ಡಿಯಾಗಿ ತಿರುಗಾಡುವುದು ಬೇಜವಾಬ್ದಾರಿ ವರ್ತನೆ. ನಿಮ್ಮ ಹಾಗೂ ಕುಟುಂಬದವರ ಜೀವ ನಿಮ್ಮ ಕೈಲಿದೆ. ಎಲ್ಲರೂ ಸ್ವಯಂ ನಿರ್ಬಂಧ ಹಾಕಿಕೊಂಡು ಮನೆಯಲ್ಲಿರೋಣ.

ಮನೆಯಿಂದ ಹೊರಬಂದು ಅನ್ಯರಿಗೆ ಕಷ್ಟಕೊಡದೆ ಮನೆಯಲ್ಲಿಯೇ ದೇವರನ್ನು ಪ್ರಾರ್ಥಿಸೋಣ. ಸಮಸ್ಯೆಯನ್ನು ಅರ್ಥೈಸಿಕೊಂಡು ಪರಸ್ಪರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಂಯಮದಿಂದ ವರ್ತಿಸೋಣ. ಕೊರೊನಾ ವೈರಸ್‌ ಪ್ರಪಂಚದಿಂದಲೇ ದೂರವಾಗಲಿ ಎಂದು ಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸುತ್ತೇನೆ.‌

–ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.