ADVERTISEMENT

ಹಂಪೆಯ ಯಂತ್ರೋದ್ಧಾರಕದಲ್ಲಿ ಪ್ರಾರ್ಥನೆ

ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿದ ಸ್ಥಳದಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:15 IST
Last Updated 24 ಡಿಸೆಂಬರ್ 2019, 16:15 IST
ವಿಶ್ವೇಶತೀರ್ಥರು 8 ದಶಕಗಳ ಹಿಂದೆ ಸನ್ಯಾಸ ಧೀಕ್ಷೆ ತೆಗೆದುಕೊಂಡ ಹಂಪೆಯ ಯಂತ್ರೋದ್ಧಾರಕ ಪ್ರಾಣದೇವರ ಚಕ್ರತೀರ್ಥದಲ್ಲಿ ವಿಶೇಷ ಪೂಜೆ ನಡೆಯಿತು.
ವಿಶ್ವೇಶತೀರ್ಥರು 8 ದಶಕಗಳ ಹಿಂದೆ ಸನ್ಯಾಸ ಧೀಕ್ಷೆ ತೆಗೆದುಕೊಂಡ ಹಂಪೆಯ ಯಂತ್ರೋದ್ಧಾರಕ ಪ್ರಾಣದೇವರ ಚಕ್ರತೀರ್ಥದಲ್ಲಿ ವಿಶೇಷ ಪೂಜೆ ನಡೆಯಿತು.   

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ಚೇತರಿಕೆಗೆ ಆಗ್ರಹಿಸಿ ನಾಡಿನ ಹಲವೆಡೆ ಪೂಜೆ ಪ್ರಾರ್ಥನೆಗಳು ಮುಂದುವರಿದಿವೆ. ಮಂಗಳವಾರ ವಿಶ್ವೇಶತೀರ್ಥರು 8 ದಶಕಗಳ ಹಿಂದೆ ಸನ್ಯಾಸ ಧೀಕ್ಷೆ ಸ್ವೀಕರಿಸಿದ ಹಂಪೆಯ ಯಂತ್ರೋದ್ಧಾರಕ ಪ್ರಾಣದೇವರ ಚಕ್ರತೀರ್ಥದಲ್ಲಿ ವಿಶೇಷ ಪೂಜೆ ನಡೆಯಿತು.

1 ಲಕ್ಷ ಧನ್ವಂತರಿ ಜಪ, 108 ಬಾರಿ ವಾಯುಸ್ತುತಿ ಪುನಶ್ಚರಣ, ಪವಮಾನ ಸೂಕ್ತ, ಮನ್ಯುಸೂಕ್ತಮ ಪನಶ್ಚರಣ, ಸುಂದರಕಾಂಡ, ವಿಷ್ಣುಸಹಸ್ರನಾಮ ಹಾಗೂ ಯಂತ್ರೋದ್ಧಾರಕಸ್ತೋತ್ರ ಮಂತ್ರಗಳನ್ನು ಪಠಿಸಲಾಯಿತು. ವಿಜಯಧ್ವಜ ವಿದ್ಯಾಪೀಠದ ಅಧ್ಯಾಪಕರು, ವಿದ್ಯಾರ್ಥಿಗಳು ಶ್ರೀಗಳ ಆರೋಗ್ಯ ಸುಧಾರಣೆಗೆ ದೇವರಲ್ಲಿ ಬೇಡಿಕೊಂಡರು.

ಆಸ್ಪತ್ರೆಗೆ ಗಣ್ಯರ ಭೇಟಿ:

ADVERTISEMENT

ಹುಣಸೋಗೆ ಕಣ್ವ ಮಠಾಧೀಶರಾದ ವಿದ್ಯಾ ಕಣ್ವವಿರಾಜ ತೀರ್ಥರು, ವಿಹಿಂಪ ರಾಷ್ಟ್ರೀಯ ಅಧ್ಯಕ್ಷರಾದ ಸದಾಶಿವ ಕೋಕಡೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂದೆ, ಮಾಜಿ ರಾಜ್ಯಪಾಲ‌ರಾದ ಸದಾಶಿವ ಕೋಕಡೆ‌, ಮೈಸೂರಿನ ಹನಸೋಗೆ ಮಠದ ವಿಶ್ವನಂದನ ತೀರ್ಥರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಭೇಟಿನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ವೈದ್ಯರ ಸುದ್ದಿಗೋಷ್ಠಿ:

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿಯ ಕುರಿತು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ, ‘ಸ್ವಾಮೀಜಿ ಆಸ್ಪತ್ರೆಗೆ ದಾಖಲಾದಾಗ ನ್ಯುಮೋನಿಯಾ ಸೇರಿ ಹಲವು ತೆರೆನಾದ ಸಮಸ್ಯೆಗಳು ಕಂಡುಬಂದಿತ್ತು. ಈಗ ಶ್ವಾಸಕೋಶ ಸೋಂಕು ಹೊರತುಪಡಿಸಿ ಬೇರೆ ಸಮಸ್ಯೆಗಳು ಕಾಣುತ್ತಿಲ್ಲ ಎಂದರು.

ರಕ್ತದಲ್ಲಿನ ಆಮ್ಲಜನಕ ಪ್ರಮಾಣವೂ ಏರಿಕೆಯಾಗಿದೆ. ರಕ್ತದೊತ್ತಡ ಸಹಜವಾಗಿದೆ. ಶ್ರೀಗಳಆರೋಗ್ಯದ ಸ್ಥಿತಿಯನ್ನು ನಿರಂತರವಾಗಿ ಪೇಜಾವರ ಮಠದ ಕಿರಿಯ ಯತಿಗಳಿಗೆ ಹಾಗೂ ಸ್ವಾಮೀಜಿಯ ಸಹೋದರರಿಗೆ ನೀಡಲಾಗುತ್ತಿದೆ ಎಂದರು.

ಆಸ್ಪತ್ರೆಗೆ ಬರುವುದು ಬೇಡ:

ಭಕ್ತರು, ಗಣ್ಯರು ನಿರಂತರವಾಗಿ ಭೇಟಿನೀಡುತ್ತಿರುವ ಕಾರಣ ತೊಂದರೆ ಎದುರಾಗಿದೆ. ಹಾಗಾಗಿ, ಆಸ್ಪತ್ರೆಗೆ ಯಾರೂ ಭೇಟಿ ನೀಡುವುದು ಬೇಡ. ಸ್ವಾಮೀಜಿ ಚೇತರಿಕೆಗೆ ಮನೆಯಿಂದಲೇ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿಕೆಎಂಸಿ ಮೆಡಿಕಲ್ ಕಾಲೇಜು ಡೀನ್‌ ಶರತ್ ರಾವ್‌, ಬೆಂಗಳೂರು ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತಜ್ಞ ವೈದ್ಯ ರಾಜೇಶ್ ಶೆಟ್ಟಿ, ಶ್ವಾಸಕೋಶ ವಿಭಾಗದ ತಜ್ಞ ವೈದ್ಯ ಸತ್ಯನಾರಾಯಣ, ಜನರಲ್ ಮೆಡಿಸಿನ್ ವಿಭಾಗದ ತಜ್ಞ ಮಂಜುನಾಥ್ ಹಂದೆ, ತುರ್ತು ಚಿಕಿತ್ಸಾ ವಿಭಾಗದ ತಜ್ಞ ಡಾ.ವಿಶಾಲ್ ಶಾನುಭಾಗ್ ಇದ್ದರು.

‘ಶ್ರೀಗಳು ರಾಮಮಂದಿರ ನೋಡಬೇಕು’

ಅಯೋಧ್ಯೆಯ ರಾಮಮಂದಿರ ಚಳವಳಿಯಲ್ಲಿ ಪೇಜಾವರ ಶ್ರೀಗಳ‌ ಪಾತ್ರ ದೊಡ್ಡದು. ರಾಮಮಂದಿರ ನಿರ್ಮಾಣದ ಪರವಾದ ತೀರ್ನಪು ಕೇಳಿ ಶ್ರೀಗಳು ಆನಂದಿಸಿದ್ದರು. ಶ್ರೀಗಳು ಭವ್ಯ ರಾಮಮಂದಿರವನ್ನು ಕಾಣುವವರೆಗೆ ನಮ್ಮೊಂದಿಗಿರಬೇಕು ಎಂದು ವಿಶ್ವ ಹಿಂದೂ ಪರಿಷತ್‌ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೋಕಡೆ ಹಾಗೂ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂದೆ, ದಿನೇಶ್ಚಂದ್ರ ಶರ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.