ADVERTISEMENT

ಸಹಕಾರ ಸಚಿವಾಲಯದಿಂದ ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ: ಎಸ್‌.ಕೆ.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 16:06 IST
Last Updated 8 ಜುಲೈ 2021, 16:06 IST

ಉಡುಪಿ: ಸಹಕಾರ ಸಚಿವಾಲಯ ಸ್ಥಾಪನೆಯಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರೆಯಲಿದ್ದು, ಸಹಕಾರಿ ರಂಗ ಪಾರದರ್ಶಕವಾಗಿರಲು ನೆರವಾಗಲಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಎಸ್‌.ಕೆ.ಮಂಜುನಾಥ್‌ ಅಭಿಪ್ರಾಯಪಟ್ಟರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿದ್ದು, 30 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. 6.30 ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವಿಸ್ತರಿಸಿಕೊಂಡಿದೆ. ಬೃಹತ್ ಕ್ಷೇತ್ರವಾದರೂ ಇಲ್ಲಿಯವರೆಗೂ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾಗಿರಲಿಲ್ಲ. ಈಗ ಸಹಕಾರ ಸಚಿವಾಲಯ ಸ್ಥಾಪನೆಗೆ ಮನ್ನಣೆ ಸಿಕ್ಕಿರುವುದು ಸ್ವಾಗತಾರ್ಹ ಎಂದರು.

ಸಹಕಾರ ಸಚಿವಾಲಯ ಸ್ಥಾಪನೆಗೆ ಸಹಕಾರ ಭಾರತಿ ಮತ್ತು ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆ ಹಲವರು ಬಾರಿ ಪ್ರಧಾನಿಗೆ ಮನವಿ ಸಲ್ಲಿಸಿತ್ತು. ಎಂದ ಮಂಜುನಾಥ್‌, ಸಹಕಾರ ಸಚಿವಾಲಯದಿಂದ ಏಕರೂಪದ ಕಾನೂನು ಜಾರಿಯಾಗಲಿದ್ದು, ಭಾರತ ಸಹಕಾರಿ ಕ್ಷೇತ್ರದ ತೊಟ್ಟಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.

ADVERTISEMENT

ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ವ್ಯಕ್ತಿಗಳು ಅಧಿಕಾರ ಪಡೆಯುವುದಕ್ಕೆ ಆರ್‌ಬಿಐ ಈಚೆಗೆ ಕಡಿವಾಣ ಹಾಕಿದ್ದು, ಕೋ-ಆಪರೇಟಿವ್‌ ಬ್ಯಾಂಕ್‌ಗಳನ್ನು ಹತೋಟಿಗೆ ತೆಗೆದುಕೊಂಡಿದೆ ಎಂದರು.

ಸಹಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಸದಾಶಿವ ಶೆಟ್ಟಿ ಮಾತನಾಡಿದರು. ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಜಿಲ್ಲಾಧ್ಯಕ್ಷ ಭಾಸ್ಕರ ಕಾಮತ್‌, ಅಭಿವೃದ್ಧಿ ಅಧಿಕಾರಿ ಡಿ.ಎಸ್‌.ವಿಜಯ, ಸಹಕಾರ ಭಾರತಿ ಕಾರ್ಯದರ್ಶಿ ಪ್ರಶಾಂತ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.