ADVERTISEMENT

ಕರಾವಳಿಗೆ ಕುಮಾರಸ್ವಾಮಿ, ರೇವಣ್ಣ ಕೊಡುಗೆ ಏನು?

ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 17:41 IST
Last Updated 19 ಮಾರ್ಚ್ 2019, 17:41 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ‘ಉಡುಪಿ ಜಿಲ್ಲೆಯ ಜನರಿಗೆ ತಿಳಿವಳಿಕೆ ಕಡಿಮೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದು ಖಂಡನೀಯ. ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಕರಾವಳಿಯ ಜನರು ಯಾವತ್ತೂ ಬೆಲೆ ನೀಡುವುದಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕರಾವಳಿಯ ಅಭಿವೃದ್ಧಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ರೇವಣ್ಣ ಯಾವ ಕೊಡುಗೆಗಳನ್ನೂ ಕೊಟ್ಟಿಲ್ಲ. ಬಂದರ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಜೆಡಿಎಸ್‌ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಕರಾವಳಿಗರನ್ನು ಅವಹೇಳನ ಮಾಡುವುದು ಸರಿಯಲ್ಲ’ ಎಂದು ಟೀಕಿಸಿದರು.

ಕರಾವಳಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ದೇವೇಗೌಡರ ಕುಟುಂಬ ಕಾರಣವಲ್ಲ. ಮುಂದಿನ ಚುನಾವಣೆಯಲ್ಲಿ ಮತದಾರರು ಜೆಡಿಎಸ್‌ಗೆ ಪಾಠ ಕಲಿಸಲಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಯಿಂದ ಬಿಜೆಪಿಯ ಗೆಲುವಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಲೋಕಪಾಲ್ ಮಸೂದೆಗೆ 5 ವರ್ಷಗಳಲ್ಲಿ 7 ಬಾರಿ ಸಭೆ ನಡೆದಿದೆ. ಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಖರ್ಗೆ ಅವರು ಲೋಕಪಾಲ್ ಮಸೂದೆ ಪರವೋ, ವಿರುದ್ಧವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಮುಗಿಸಿದಂತೆ ದೇಶದಲ್ಲಿ ಲೋಕಪಾಲ್ ಮುಗಿಸುವ ಆಲೋಚನೆ ಇದೆಯೇ ಎಂದು ಕೋಟ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.