ADVERTISEMENT

‘ಅಧಿಕಾರ ಹೋದ ಬಳಿಕ ಅರಸು ಮರೆತರು’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 6:56 IST
Last Updated 24 ಫೆಬ್ರುವರಿ 2018, 6:56 IST
ದಿವಂಗತ ಡಿ.ದೇವರಾಜ ಅರಸು ಅವರ ಆಳೆತ್ತರದ ಮೂರ್ತಿ ನಿರ್ಮಾಣಕ್ಕೆ ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸ್ ಶುಕ್ರವಾರ ಶಂಕು ಸ್ಥಾಪನೆ ಮಾಡಿದರು. ಬಿ.ಕೆ.ಶಿವರಾಂ ಇದ್ದಾರೆ
ದಿವಂಗತ ಡಿ.ದೇವರಾಜ ಅರಸು ಅವರ ಆಳೆತ್ತರದ ಮೂರ್ತಿ ನಿರ್ಮಾಣಕ್ಕೆ ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸ್ ಶುಕ್ರವಾರ ಶಂಕು ಸ್ಥಾಪನೆ ಮಾಡಿದರು. ಬಿ.ಕೆ.ಶಿವರಾಂ ಇದ್ದಾರೆ   

ಸಿದ್ದಾಪುರ: ‘ದೇವರಾಜ ಅರಸು ಅವರ ಅಧಿಕಾರ ಹೋದ ನಂತರ, ರಾಜಕೀಯ ವಾಸನೆ ಇರುವ ಎಲ್ಲರೂ ಅವರನ್ನು ಮರೆತರು’ ಎಂದು ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸ್ ವಿಷಾದ ವ್ಯಕ್ತಪಡಿಸಿದರು.

ದೇವರಾಜ ಅರಸು ಹಿಂದುಳಿದ, ರೈತ, ಕೃಷಿ ಕಾರ್ಮಿಕರ ಬಳಗದ ಆಶ್ರಯದಲ್ಲಿ ತಾಲ್ಲೂಕಿನ ತರಳಿಮಠದ ಆವರಣದಲ್ಲಿ ದೇವರಾಜ ಅರಸು ಅವರ ಆಳೆತ್ತರದ ಮೂರ್ತಿ ಸ್ಥಾಪನೆಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಭಾಷಣ ಮಾಡುವಾಗ ಎಲ್ಲರೂ ಅರಸು ಅವರ ಹೆಸರು ಹೇಳುತ್ತಾರೆ. ಆದರೆ ಈ ಜನ ಅರಸು ಹೆಸರು ಶಾಶ್ವತವಾಗಿ ಇರುವಂತಾಗಲು ಮೂರ್ತಿ ಸ್ಥಾಪನೆ ಮಾಡುತ್ತಿದ್ದಾರೆ. ಅದು ಇಲ್ಲಿನ ಜನರ ಹೃದಯದೊಳಗಿನ ಕೃತಜ್ಞತಾ ಭಾವವನ್ನು ತೋರಿಸುತ್ತದೆ. ಆದ್ದರಿಂದ ನಿಮಗೆ ದೊಡ್ಡ ನಮಸ್ಕಾರ ಹೇಳುತ್ತೇನೆ’ ಎಂದರು.

ADVERTISEMENT

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ‘ಧ್ವನಿ ಇಲ್ಲದವರಿಗೆ ಧ್ವನಿ ನೀಡಿದಂತಹ, ಶೋಷಿತರಿಗೆ ಶಕ್ತಿ ತುಂಬಿದ ಅರಸು ಅವರನ್ನು ನಾವು ಮರೆಯುತ್ತಿದ್ದೇವೆ. ರೈತಾಪಿ ಜನ ಅವರನ್ನು ಮರೆಯುವುದರಲ್ಲಿ ಆಶ್ಚರ್ಯ ಇಲ್ಲ, ಜೀವನದ ನೋವು–ನಲಿವು, ಜಂಜಡದಲ್ಲಿ ಅವರು ಮರೆಯಬಹುದು. ಆದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲಿ ಪುತ್ಥಳಿ ನಿರ್ಮಿಸುವ ಕೆಲಸ ಮಾಡಬೇಕಾಗಿತ್ತು. ಅದನ್ನು ಮಾಡಿಲ್ಲ. ಅದು ಈ ರಾಜ್ಯದ ದುರಂತ’ ಎಂದರು.

ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ, ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲ ಸೌಕರ್ಯ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ, ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮಂಜುನಾಥ ಗೌಡ, ಕಾಂಗ್ರೆಸ್ ಧುರೀಣ ದಯಾನಂದ, ಗಣ್ಯರಾದ ನಾರಾಯಣ ರೆಡ್ಡಿ, ಮಂಜುನಾಥ ನಾಯ್ಕ ಹರಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.