ADVERTISEMENT

ಅನಿಲ ಟ್ಯಾಂಕರ್ ಉರುಳಿ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST
ಅನಿಲ ಟ್ಯಾಂಕರ್ ಉರುಳಿ ಸಂಚಾರ ಸ್ಥಗಿತ
ಅನಿಲ ಟ್ಯಾಂಕರ್ ಉರುಳಿ ಸಂಚಾರ ಸ್ಥಗಿತ   

ಯಲ್ಲಾಪುರ (ಉ.ಕ.ಜಿಲ್ಲೆ): ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಗುರುವಾರ ಮಧ್ಯರಾತ್ರಿ ಇಲ್ಲಿಯ ಅರಬೈಲ್ ಘಟ್ಟದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ಶುಕ್ರವಾರ ಇಡೀ ದಿನ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಮಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಟ್ಯಾಂಕರ್, ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿತ್ತು. ಶುಕ್ರವಾರ ಮುಂಜಾನೆ ಕ್ರೇನ್ ಮೂಲಕ ಟ್ಯಾಂಕರ್ ಮೇಲೆತ್ತುವಾಗ ಟ್ಯಾಂಕರ್ ಮತ್ತೆ ಕೆಳಗೆ ಬಿದ್ದು, ಅನಿಲ ಸೋರಿಕೆಯುಂಟಾಗಿ ದಟ್ಟ ಮೋಡದಂತೆ  ಹರಡಿಕೊಂಡಿದ್ದರಿಂದ ಆತಂಕದ ವಾತಾವರಣ ಉಂಟಾಗಿತ್ತು.

ಯಾವುದೇ ಕ್ಷಣದಲ್ಲಿ ಟ್ಯಾಂಕರ್ ಸ್ಫೋಟವಾಗಬಹುದೆಂಬ ಭೀತಿ ಉಂಟಾಗಿದ್ದರಿಂದ ಪೊಲೀಸರು ಘಟನಾ ಸ್ಥಳಕ್ಕೆ ಯಾರೂ ಹೋಗದಂತೆ ನೋಡಿಕೊಂಡರು. ಹೀಗಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.

ಸುಮಾರು ನಾಲ್ಕೈದು ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಯಾಯಿತು. ಹಲವಾರು ವಾಹನಗಳು ಶಿರಸಿ ಮಾರ್ಗವಾಗಿ ಪ್ರಯಾಣಿಸಿದರೆ ವಾಹನಗಳು ಸಾಲಿನಲ್ಲಿ ಸಿಕ್ಕಿಹಾಕಿಕೊಂಡು ಪ್ರಯಾಣಿಸಲಾರದಂಥ ಸ್ಥಿತಿ ಉಂಟಾಯಿತು.
 
ಅಂಕೋಲಾ ಮತ್ತು ಶಿರಸಿಯಿಂದ ಎರಡು ಅಗ್ನಿಶಾಮಕ ದಳದ ವಾಹನಗಳು ಬಂದು, ಅನಿಲ ತೊಳೆದುಕೊಂಡು ಹೋಗುವಂತೆ ಮಾಡಲಾಯಿತಾದರೂ ಅನಿಲ ಸೋರಿಕೆ ನಿಲ್ಲಲಿಲ್ಲ.  ರಾತ್ರಿ 8ರ ನಂತರ ವಾಹನ ಸಂಚಾರ ಸುಗಮವಾಯಿತು.
 
ಉಪ ವಿಭಾಗಾಧಿಕಾರಿ ಗೌತಮ್ ಬಗಾದಿ, ತಹಶೀಲ್ದಾರ ಕಲ್ಲೂರಮಠ, ಡಿವೈಎಸ್‌ಪಿ ಎನ್.ಡಿ.ಬಿರ್ಜೆ, ಪೊಲೀಸ್ ಇನ್ಸ್‌ಪೆಕ್ಟರ್ ಅರವಿಂದ ಕಲಗುಜ್ಜಿ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ, ದುರಂತ ನಡೆಯದಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.