ಕುಮಟಾ: ಮಳೆಗಾಲ ಮುಗಿಯುತ್ತಿದ್ದಂತೆಯೇ ಹಳ್ಳಿಯಿಂದ ವರ್ಷಕ್ಕೊಮ್ಮೆ ಅಪರೂಪದ ಅತಿಥಿಗಳಂತೆ ಪೇಟೆಗೆ ಮಾರಾಟಕ್ಕೆ ಬರುವ ಬಗೆ ಬಗೆಯ ಗಡ್ಡೆ ಗೆಣಸುಗಳು ಅವುಗಳ ರುಚಿ ಗೊತ್ತಿದ್ದವರ ಬಾಯಲ್ಲಿ ನೀರೂರಿಸುತ್ತವೆ.
ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಬತ್ತ, ಶೇಂಗಾ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿದರೆ ವಿವಿಧ ಜಾತಿಯ, ರುಚಿಕರ ಗಡ್ಡೆ ಗೆಣಸುಗಳ ಕೃಷಿಗೂ ತೋಟದಲ್ಲಿ ಪ್ರತೀ ವರ್ಷ ನಿಶ್ಚಿತ ಜಾಗವಿರುತ್ತದೆ. ಹಳ್ಳಿಯ ಮನೆಮಾತಾಗಿರುವ ಗಡ್ಡೆ- ಗೆಣಸುಗಳಲ್ಲಿ ಕರಿ ಕೆಸು, ಮೊಟ್ಟಗೆಸು, ಗುಟಗಣಗಾ, ಸುವರ್ಣಗಡ್ಡೆ, ಗೊಣ್ಣೆಗಡ್ಡೆ ಸೇರಿವೆ. ಒಂದೊಂದು ಬಗೆಯ ಗಡ್ಡೆಗೂ ಒಂದೊಂದು ಬಗೆಯ ರುಚಿ. ಇಂದು ಹಸಿರು ತರಕಾರಿ ನಿತ್ಯದ ಆಹಾರವಾಗಿದ್ದರೆ, ಹಿಂದೆ ಈ ಗಡ್ಡೆ- ಗೆಣಸುಗಳೇ ಕೃಷಿಕನ ಮನೆಯ ಆಹಾರವಾಗಿದ್ದವು.
ಬೇಸಿಗೆಯಲ್ಲಿ ಒಣಗಿದ ಸಗಣಿ ಗೊಬ್ಬರ ಹಾಗೂ ಬತ್ತದ ಸಿಪ್ಪೆಯನ್ನು ಮಣ್ಣಿನಲ್ಲಿ ಮಿಶ್ರಣ ಮಾಡಿ ಗಡ್ಡೆಗಳ ಬೀಜವನ್ನು ಅದರಲ್ಲಿ ನೆಡುತ್ತಾರೆ. ಗಡ್ಡೆ ಬೆಳೆಯುತ್ತಾ ಬೆಳೆಯುತ್ತಾ ಭೂಮಿಯ ಆಳಕ್ಕೆ ಸುಲಭದಲ್ಲಿ ಇಳಿಯುವಂತೆ ಅನಕೂಲವಾಗಲು ಒಣಗಿದ ಗೊಬ್ಬರ ಹಾಗೂ ಬತ್ತದ ಸಿಪ್ಪೆಯನ್ನು ಮಣ್ಣಿನಲ್ಲಿ ಮಿಶ್ರಣ ಮಾಡಲಾಗುತ್ತದೆ.ಸುವರ್ಣ ಗಡ್ಡೆ, ಕರಿಕೆಸು, ಮೊಟ್ಟಗೆಸು ಮುಂತಾದವು ಗಿಡವಾಗಿ ಬೆಳೆದರೆ, ಗುಡಗಣಗಾ, ಗೊಣ್ಣೆ ಗಡ್ಡೆ ಬಳ್ಳಿಯಾಗಿ ಬೆಳೆಯುತ್ತವೆ.
ಗುಟಗೆಣಗಾ ಬಳ್ಳಿಗೆ ಗುಟ್ಟ (ಗೂಟ)ಗಳನ್ನು ಆಧಾರಕ್ಕೆ ನಿಲ್ಲಿಸಿದರೆ, ಗೊಣ್ಣೆಗಡ್ಡೆ ಬಳ್ಳಿಯನ್ನು ಮಾವು, ಗೇರು, ಪೇರಲ ಮರಗಳಿಗೆ ಹಬ್ಬಿಸಲಾಗುತ್ತದೆ. ಮಳೆಗಾಲದಲ್ಲಿ ಮಧ್ಯೆ ಇವುಗಳಿಗೆ ಯಾವ ಗೊಬ್ಬರ, ಆರೈಕೆಯೂ ಅಗತ್ಯವಿಲ್ಲ. ಬಳ್ಳಿಗಳು ತುಂಡಾಗದಂತೆ ನೋಡಿಕೊಂಡರಷ್ಟೇ ಆಯಿತು. ಆಲುಗಡ್ಡೆಯನ್ನು ಹೋಲುವ, ಆದರೆ ಕೊಂಚ ಉದ್ದವಿರುವ ಗುಟಗಣಗಾ ಗಡ್ಡೆಯನ್ನು ಉಪ್ಪು ಹಾಕಿ ನೀರಿನಲ್ಲಿ ಬೇಯಿಸಿ ತಿಂದರೆ ಅದರ ರುಚಿಯೇ ಅದ್ಭುತ.
ಮೊಟ್ಟಗೆಸುವಿನ ಸಿಪ್ಪೆ ಸುಲಿದು ಸಾಂಬಾರು ಮಾಡಿದರೆ ಅದರ ರುಚಿಗೆ ಯಾವ ಗಡ್ಡೆಯೂ ಸಾಟಿಯಿಲ್ಲ. ಅದರ ಸಾಂಬಾರಿಗೆ ಸಿಗಡಿ, ಅಡ್ಡ ಬೆಳಚು ಹಾಕಿದರಂತೂ ಅದು ವಿಶೇಷ ಖಾದ್ಯವಾಗುತ್ತದೆ. ಎರಡು ಅಡಿ ಉದ್ದ, ಕೈ ತೋಳಿದಷ್ಟು ದಪ್ಪವಿರುವ ಕರಿ ಕೆಸು ಕೂಡ ರುಚಿಕರ. ಇದನ್ನು ಸಹ ಸಂಬಾರು ಮಾಡುತ್ತಾರೆ.
ಇದನ್ನು ಚಕ್ರದಾಕಾರದಲ್ಲಿ ತೆಳುವಾಗಿ ಕತ್ತರಿಸಿ ಬೆಲ್ಲದ ಕೊಪ್ಪರಿಗೆಯಲ್ಲಿ ಬೇಯಿಸಿದರೆ ಇನ್ನೊಂದು ಬಗೆಯ ರುಚಿಯ ಖಾದ್ಯವಾಗುತ್ತದೆ. ಈ ಎಲ್ಲ ಗಡ್ಡೆಗಳಲ್ಲೂ ನಮ್ಮ ನಿತ್ಯದ ತರಕಾರಿಯಾದ ಆಲುಗಡ್ಡೆಯಲ್ಲಿರುವುದಕ್ಕಿಂತ ಹೆಚ್ಚಿನ ಪೋಷಕಾಂಶವಿರುತ್ತವೆ. ಹಿಂದೆ ಅಂಗಡಿಯಲ್ಲಿ ಕೊಳ್ಳುವ ಅಲುಗಡ್ಡಗೆ ಬದಲಾಗಿ ಹಿಂದೆ ಈ ಗಡ್ಡೆಗಳನ್ನು ಆಹಾರದಲ್ಲಿ ಬಳಕೆ ಮಾಡಲಾಗುತ್ತಿತ್ತು. ಇವುಗಳಲ್ಲಿ ಔಷಧೀಯ ಗುಣವಿರುವುದು ಇನ್ನೊಂದು ವಿಶೇಷ.
ಈ ಎಲ್ಲ ಗಡ್ಡೆಗಳು ಹಿಂದೆ ಎಲ್ಲ ರೈತನ ಮನೆಯ ತೊಟದ ಖಾಲಿ ಜಾಗದ ಕಾಯಂ ಅತಿಥಿಗಳಾಗಿದ್ದವು. ಆದರೆ ಇಂದು ಈ ಅತಿಥಿಗಳಿಗೆ ಎಲ್ಲ ರೈತರ ಮನೆಯ ತೋಟದಲ್ಲಿ ಜಾಗವಿಲ್ಲ. ಕಾರಣ- ಇವುಗಳನ್ನು ಬೆಳೆಯಲು ತಾಳ್ಮೆಯಿಲ್ಲವಾಗಿದೆ. ಆದ್ದರಿಂದ ಇವು ಈಗ ಪೇಟೆಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುವ ಅಪರೂಪದ ಅತಿಥಿಗಳಾಗಿಬಿಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.