ADVERTISEMENT

ಇತ್ಯರ್ಥವಾಗದ ನಾಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 9:50 IST
Last Updated 1 ಅಕ್ಟೋಬರ್ 2011, 9:50 IST

ಕುಮಟಾ: ಸಮೀಪದ ವನ್ನಳ್ಳಿ ಸಮುದ್ರ ತೀರದಿಂದ ಸೆ. 19 ರಂದು  ಸ್ನೇಹಾ ಗಣಪತಿ ನಾಯ್ಕ ಎಂಬ ಯುವತಿ ನಾಪತ್ತೆಯಾದ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.


ಮೂಲತಃ ಬಾಡ ಗ್ರಾಮದ ಆಕೆಯ ಬ್ಯಾಗು ವನ್ನಳ್ಳಿ ಸಮುದ್ರ ತೀರದ ಬಂಡೆಯ ಮೇಲೆ ಸಿಕ್ಕಿದ್ದು, ಅದರಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಮರುದಿನ ದಡದ ಸಮೀಪ ಸಮುದ್ರದಲ್ಲಿ ಕಂಡ ಯುವತಿಯ ಶವ ಸ್ನೇಹಾಳದೆಂದು ಅಂದಾಜು ಮಾಡಲಾಗಿದೆ. ಪೊಲೀಸರು ಸಮುದ್ರ ತೀರಕ್ಕೆ ಬರುವ ಮೊದಲೇ ಶವ ಅಲೆಗಳ ಹೊಡೆತಕ್ಕೆ  ದೂರ ಸಾಗಿದೆ.

`ಸ್ನೇಹಾ ಬೆಂಗಳೂರಿನಿಂದ ಬಾಡದಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದು ನಂತರ ವನ್ನಳ್ಳಿ ಸಮುದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ~ ಎಂದು ಸ್ಥಳೀಯರು ತಿಳಿಸುತ್ತಾರೆ.

`ಸದ್ಯ ಯುವತಿ ನಾಪತ್ತೆಯಾದ ಪ್ರಕರಣವನ್ನು ಮಾತ್ರ ದಾಖಲಿಸಲಾಗಿದೆ. ತನಿಖೆ ನಡೆಸಿದಾಗ ಬೆಂಗಳೂರಿನಲ್ಲಿ ಆಕೆ ಕೆಲಸ ಮಾಡುವ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ದಾವಣಗೆರೆ ಮೂಲದ ಡಿಪ್ಲೊಮಾ ಎಂಜಿನಿಯರಿಂಗ್ ಓದಿರುವ ಯುವಕನನ್ನು ಯುವತಿ ಪ್ರೀತಿಸುತ್ತಿರುವ ವಿಷಯ ತಿಳಿದು ಬಂದಿದೆ. ಆದರೆ ಇಬ್ಬರ ಜಾತಿಯೂ  ಬೇರೆಯಾಗಿದ್ದರಿಂದ ಯುವಕ ಸ್ನೇಹಾಳಿಗೆ `ನಿನ್ನನ್ನು  ಮದುವೆಯಾಗುವುದು ಸಾಧ್ಯವಿಲ್ಲ~  ಎಂದು ನಿರಾಕರಿಸಿದ್ದಾನೆ.

ಯುವತಿ ಕಣ್ಮರೆಯಾಗುವ ದಿನ ಇಬ್ಬರೂ ತಮ್ಮ ಮೊಬೈಲ್ ಫೊನ್‌ಗಳಿಂದ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲೇ ನೆಲೆಸಿರುವ ಯುವತಿಯ ತಂದೆ ಗಣಪತಿ ನಾಯ್ಕ ಅವರು ಇದುವರೆಗೂ ತಮ್ಮ ಮಗಳು ನಾಪತ್ತೆಯಾಗಲು ಇಂಥವರು  ಕಾರಣ ಎಂದು  ಯಾರ ಮೇಲೂ ದೂರು ಕೊಡಲು ಮುಂದೆ ಬಂದಿರುವುದಿಲ್ಲ. ಆದ್ದರಿಂದ ಪ್ರಕರಣ ಇತ್ಯರ್ಥವಾಗದೇ ಹಾಗೇ ಉಳಿದಿದೆ~ ಎಂದು ಸಿ.ಪಿ.ಐ. ಕೆ. ಶ್ರೀಕಾಂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT