ಹಳಿಯಾಳ:`ಪಟ್ಟಣದಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿ ಬರುತ್ತಿರುವುದರಿಂದ ರೋಗಗಳು ಹರಡಲು ಸಾಧ್ಯತೆಗಳು ಹೆಚ್ಚಾಗುತ್ತಿದೆ. ಪಟ್ಟಣ ಪಂಚಾಯಿತ ಶುದ್ದ ಕ್ಲೋರಿನ್‌ಯುಕ್ತ ಕುಡಿಯುವ ನೀರನ್ನು ಸಕಾಲಕ್ಕೆ ನಾಗರಿಕರಿಗೆ ಸರಬರಾಜು ಮಾಡಬೇಕು~ ಎಂದು ಡಾ.ಬಿ.ಬಿ ಮುಡಬಾಗಿಲ ಆಗ್ರಹಿಸಿದರು.
ಡೆಂಗೆ ಹಾಗೂ ಚಿಕುನ್‌ಗುನ್ಯ ಮತ್ತಿತರ ರೋಗಗಳ ತಡೆಗಟ್ಟುವ ಕ್ರಮಗಳ ಬಗ್ಗೆ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬುಧವಾರ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
`ಪಟ್ಟಣದಲ್ಲಿ ಪೂರೈಕೆಯಾಗುವ ಕುಡಿಯುವ ನೀರಿನ ಕೊಳವೆಯಲ್ಲಿ ಸಾಕಷ್ಟು ಮಣ್ಣು ಮಿಶ್ರಿತ ಹಾಗೂ ಕ್ರಿಮಿಕೀಟ ಮಿಶ್ರಿತ ನೀರು ಸರಬರಾಜಾಗುತ್ತಿದೆ. ಸಾರ್ವಜನಿಕರು ಸಹ ತಮ್ಮ ಆರೋಗ್ಯ ರಕ್ಷಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಗತ್ಯವಾಗಿದೆ~ ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಜೆ.ಎ.ಅತ್ತಾರ ಹಾಗೂ ಡಾ.ಎಂ.ಜಿ.ಗೋಖಲೆ ಮಾತನಾಡಿ, `ಹಳಿಯಾಳ ಪಟ್ಟಣದಲ್ಲಿ ನಿರ್ಮಿಸಿದಂತಹ ಕಾಲುವೆಗಳನ್ನು ನಿರ್ಮಾಣ ಹಂತದಿಂದ ಈವರೆಗೂ ಸ್ವಚ್ಛತೆಗೊಳಿಸಿರುವುದಿಲ್ಲ. ಇದರಿಂದ ಕಾಲುವೆಗಳಲ್ಲಿ ಕಸಕಡ್ಡಿ ಹಾಗೂ ಕೊಳಕು ನೀರು ಶೇಖರಣೆಯಾಗಿ ಕ್ರಿಮಿಕೀಟಗಳು ಉತ್ಪತ್ತಿಯಾಗಿ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಪಂಚಾಯಿತಿಯವರು ಶೀಘ್ರ ಕ್ರಮ ಕೈಗೊಳ್ಳಬೇಕು~ ಎಂದು ವಿನಂತಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ತಾಲ್ಲೂಕು ವೈದ್ಯಾಧಿಕಾರಿ ಡಾ.ಎಲ್.ಎಲ್. ರಾಠೋಡ ಮಾತನಾಡಿ, ರೋಗ ತಡೆಗೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈಗಾಗಲೇ ರೋಗಗಳು ಹತೋಟಿಯಲ್ಲಿವೆ ಎಂದರು.
ತಾಲ್ಲೂಕು ದಂಡಾಧಿಕಾರಿ ಶಾರದಾ ಸಿ.ಕೋಲಕಾರ ಮಾತನಾಡಿ, ಪಟ್ಟಣದಾದ್ಯಂತ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಂಚಾಯಿತಿಯಿಂದ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕೆಂದು ಪಂಚಾಯಿತಿ ಅಧಿಕಾರಿಗಳಿಗೆ ಆದೇಶಿಸಿದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀಕಾಂತ ಹೂಲಿ, ಸದಸ್ಯರಾದ ಉಮೇಶ ಬೊಳಶೆಟ್ಟಿ, ರಾಜುಸಿಂಗ್ ರಜಪೂತ, ಖಾಕೇಶ್ಯಾ ಮಕಾನದಾರ ಮಾತನಾಡಿದರು. ಪ.ಪಂ. ಅಧ್ಯಕ್ಷೆ ಭಾರತಿ ಗೋಂಧಳಿ, ಉಪಾಧ್ಯಕ್ಷ ಸಂತಾನ ಸಾವಂತ, ಸದಸ್ಯರಾದ ಸರಸ್ವತಿ ವಡ್ಡರ, ರಮೇಶ ಪೂಜಾರಿ, ಸೋಮನಗೌಡಾ ಹಟ್ಟಿಹೊಳಿ, ಮುಖ್ಯಾಧಿಕಾರಿ ಮನ್ಸೂರಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.