ADVERTISEMENT

ಕಾರವಾರ ದ್ರಾಕ್ಷಾರಸ ಉತ್ಸವ– 2017’ ಕ್ಕೆ ತೆರೆ

ದೇವರಾಜ ನಾಯ್ಕ
Published 27 ನವೆಂಬರ್ 2017, 9:49 IST
Last Updated 27 ನವೆಂಬರ್ 2017, 9:49 IST
ಕಾರವಾರದ ದ್ರಾಕ್ಷಾರಸ ಉತ್ಸವದಲ್ಲಿ ಸೇರಿರುವ ಜನರು
ಕಾರವಾರದ ದ್ರಾಕ್ಷಾರಸ ಉತ್ಸವದಲ್ಲಿ ಸೇರಿರುವ ಜನರು   

ಕಾರವಾರ: ಕರ್ನಾಟಕ ದ್ರಾಕ್ಷಾರಸ ಮಂಡಳಿ, ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ನಗರದ ಕೋಡಿಬಾಗ ಕಾಳಿ ರಿವರ್ ಗಾರ್ಡನ್‌ನಲ್ಲಿ ಆಯೋಜನೆಗೊಂಡಿದ್ದ ‘ಕಾರವಾರ ದ್ರಾಕ್ಷಾರಸ ಉತ್ಸವ– 2017’ ಮೂರು ದಿನಗಳ ಬಳಿಕ ಭಾನುವಾರ ಕೊನೆಗೊಂಡಿತು.

‘ಶುಕ್ರವಾರವಷ್ಟೇ (ನ.24) ಚಾಲನೆಗೊಂಡಿದ್ದ ಈ ಉತ್ಸವಕ್ಕೆ ಎರಡೇ ದಿನದಲ್ಲಿ ಸಾವಿರಾರು ಮಂದಿ ಆಗಮಿಸಿ ₨ 11 ಲಕ್ಷ ವಹಿವಾಟು ನಡೆಸಿದ್ದಾರೆ. ಇಷ್ಟು ವಹಿವಾಟು ನಡೆಯುತ್ತದೆ ಎಂಬ ಬಗ್ಗೆ ಒಂದಿಷ್ಟು ನಿರೀಕ್ಷೆ ಕೂಡ ನಮಗಿರಲಿಲ್ಲ. ಗೋವಾ ಸಮೀಪ ಇರುವುದರಿಂದ ಇದು ವೈನ್‌ ಮಾರುಕಟ್ಟೆ ಸ್ಥಳವಲ್ಲ ಎಂದು ಎಲ್ಲರೂ ತಿಳಿದಿದ್ದೆವು. ಅನೇಕ ವೈನ್‌ ಕಂಪೆನಿಗಳು ಇದೇ ಕಾರಣಕ್ಕಾಗಿಯೇ ಇಲ್ಲಿ ಬರಲು ಹಿಂದೇಟು ಹಾಕಿದವು. ಬಂದಿರುವ ಅನೇಕ ಕಂಪೆನಿಗಳು ಕೂಡ ವೈನ್‌ಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ಇಲ್ಲಿಗೆ ತಂದಿದ್ದವು. ಆದರೆ ಮೊದಲ ದಿನದ ವ್ಯಾಪಾರಕ್ಕೆ ಅನೇಕ ಮಳಿಗೆಗಳಲ್ಲಿ ವೈನ್‌ಗಳು ಖಾಲಿಯಾಗಿಬಿಟ್ಟಿವೆ’ ಎನ್ನುತ್ತಾರೆ ದ್ರಾಕ್ಷಾರಸ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಸರ್ವೇಶ್‌ಕುಮಾರ್.

ಉತ್ಸವದ ಮೂರು ದಿನದ ಸಂಜೆಯ ವೇಳೆ ನಡೆದ ಶಿವಮೊಗ್ಗದ ಸಮನ್ವಯ ತಂಡ, ಜೆಹೆನ್ ಬ್ಯಾಂಡ್, ನಾಯ್ಕ ದಿ ಜಾಯ್ಸ್‌ ತಂಡಗಳ ಸಂತೀಗ ವೈನ್‌ ಪ್ರಿಯರಿಗೆ ಮತ್ತಷ್ಟು ಮತ್ತೇರಿಸಿತು. ಶನಿವಾರದ ಜೆಹೆನ್ ಮ್ಯೂಸಿಕ್ ಬ್ಯಾಂಡ್‌ನವರ ಸಂಗೀತ ಸಂಜೆಗೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು.

ADVERTISEMENT

ವಿದೇಶಿ ಬ್ರಾಂಡ್‌ನಿಂದ ಹಿಡಿದು ದೇಶಿಯ ಹಾಗೂ ಸ್ಥಳೀಯ ಬ್ರಾಂಡ್‌ಗಳು ಈ ಉತ್ಸವದಲ್ಲಿ ವೈನ್‌ ಪ್ರಿಯರಿಗೆ ಒಂದೇ ಸೂರಿನಡಿ ಲಭ್ಯವಾಗಿದೆ. ಮೂರು ದಿನಗಳವರೆಗೆ ಎಳೆಯರು, ಹಿರಿಯರು, ಪುರುಷ, ಮಹಿಳೆ ಎಂಬ ಭೇದಭಾವ ಇಲ್ಲದೇ ಜನತೆ ಮೂರು ದಿನಗಳವರೆಗೆ ಕುಡಿದು, ತಿಂದು, ಸಂಗೀತದ ಅಲೆಯಲ್ಲಿ ತೇಲಿದರು. ‘ಮತ್ತೊಮ್ಮೆ, ಮಗದೊಮ್ಮೆ ಈ ಉತ್ಸವ ಇಲ್ಲಿ ಆಯೋಜನೆಗೊಂಡರೂ ಕೂಡ ಜನರ ಪ್ರತಿಕ್ರಿಯೆ ಇಷ್ಟೇ ಉತ್ತಮವಾಗಿ ಇರುತ್ತದೆ. ಜಿಲ್ಲಾಡಳಿತ ಇದನ್ನು ಮರು ಆಯೋಜನೆ ಮಾಡಲಿ’ ಎನ್ನುತ್ತಾರೆ ಸ್ಥಳೀಯ ವಿನಾಯಕ್ ಬಾಂದೇಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.