ADVERTISEMENT

ಗೋವಿಗೆ ಗೋಗ್ರಾಸ; ಹೋಳಿಗೆ ಊಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 9:40 IST
Last Updated 15 ನವೆಂಬರ್ 2012, 9:40 IST

ಶಿರಸಿ: ಕೃಷಿ ಬದುಕಿನ ಸಂಗಾತಿಯಾದ ಗೋವುಗಳ ಪೂಜೆ, ಕೃಷಿ ಸಲಕರಣೆ, ಆಯುಧಗಳ ಆರಾಧನೆಯ ಮೂಲಕ ಕೃಷಿಕನ ಜೀವನದೊಂದಿಗೆ ಥಳಕು ಹಾಕಿಕೊಂಡ ಭರವಸೆಯ ದೀಪ ಬೆಳಗುವ ದೀಪಾವಳಿ ಹಬ್ಬ ತಾಲ್ಲೂಕಿನಲ್ಲಿ ಸಂಭ್ರಮದಿಂದ ಜರುಗಿತು.

ನರಕ ಚತುರ್ದಶಿಯಂದು ಮನೆಗೆ ಕರೆತಂದು ಪೂಜಿಸಿದ ಬಲೀಂದ್ರನನ್ನು `ದಿಪ್ಪಣ ದಿಪ್ಪಣ ದೀವಾಳಗ್ಯೋ, ಇಂದು ಹೋಗಿ ಮುಂದ ಬಾ ಹಲಾಬ್ಯೋ..~ ಎನ್ನುತ್ತ ಬುಧವಾರ ಸಂಜೆ ಕಳುಹಿಸಿಕೊಡುವ ಮೂಲಕ ಸಂಭ್ರಮದ ದೀಪಾವಳಿ ಹಬ್ಬಕ್ಕೆ ತೆರೆ ಬಿತ್ತು.

ದೀಪಾವಳಿಯ ಮೂರು ದಿನಗಳ ಆಚರಣೆಯಲ್ಲಿ (ಈ ಬಾರಿ ಪಂಚಾಂಗದ ಪ್ರಕಾರ ಎರಡು ದಿನ) ಬಲಿಪಾಡ್ಯದ ದಿನ ಗ್ರಾಮೀಣ ಜನರಿಗೆ ಹೆಚ್ಚು ವಿಶೇಷ. ರೈತರ ಬಂಟನಾಗಿ ವರ್ಷವಿಡೀ ಕೆಲಸ ಮಾಡುವ ಗೋವುಗಳಿಗೆ ಹಣ್ಣಡಿಕೆ, ಸಿಂಗಾರ, ಪಚ್ಚೆತೆನೆ, ವೀಳ್ಯದೆಲೆಗಳಿಂದ ಸಿದ್ಧಪಡಿಸಿದ ವಿಶೇಷ ಹಾರ ಹಾಕಿ, ಶೇಡಿ-ಕೆಮ್ಮಣ್ಣುಗಳಿಂದ ಗೋವುಗಳ ಮೈಮೇಲೆ ಚಿತ್ರ ಬರೆದು ಗೋಗ್ರಾಸ (ವಿಶೇಷ ಆಹಾರ) ನೀಡಿ ಪೂಜಿಸಲಾಯಿತು. ಗೋಪೂಜೆ ಹಿನ್ನೆಲೆಯಲ್ಲಿ ಮಹಿಳೆಯರು ಕೊಟ್ಟಿಗೆಯಲ್ಲಿ ಕೊಳಚು (ದನದ ಹೆಜ್ಜೆ ಗುರುತು) ಬರೆದು ಅಲಂಕರಿಸಿದರು.

ಪೂಜೆಯ ನಂತರ ಹೊಸ ಉಡುಗೆಯುಟ್ಟು ಬೂರೆಹಬ್ಬದಂದು ತಯಾರಿಸಿಟ್ಟಿದ್ದ ಬೂರೆಕಪ್ಪನ್ನು ಮನೆಯ ಹಿರಿಕಿರಿಯರೆಲ್ಲ ಕಡ್ಡಾಯವಾಗಿ ಹಚ್ಚಿಕೊಳ್ಳಬೇಕು. ಬೂರೆಕಪ್ಪಿಗೆ ಜಗತ್ತಿನ ಕೆಟ್ಟ ದೃಷ್ಟಿಯಿಂದ ಕಾಪಾಡುವ ಶಕ್ತಿಯಿದೆಯೆಂಬ ನಂಬಿಕೆ ಹಳ್ಳಿಗರಲ್ಲಿದೆ.

ನಂತರ ದೈನಂದಿನ ಕೃಷಿ ಕಾರ್ಯಕ್ಕೆ ಬಳಕೆಯಾಗುವ ಕೃಷಿ ಸಲಕರಣೆ, ಯಂತ್ರ, ಮನೆಯಲ್ಲಿರುವ ವಾಹನ, ಆರ್ಥಿಕ ಉನ್ನತಿಗೆ ಪ್ರಾರ್ಥಿಸಿ ಹಣದ ಪೆಟ್ಟಿಗೆಗಳಿಗೆ ಹಳ್ಳಿಗರು ಪೂಜೆ ಸಲ್ಲಿಸಿದರು. ಹೋಳಿಗೆ ಊಟದ ನಂತರ ಮತ್ತಷ್ಟು ಧಾರ್ಮಿಕ ಆಚರಣೆಗಳು ನಡೆದವು.
ದೀಪಾವಳಿ ಮನೆ ಬೆಳಗುವದಷ್ಟೇ ಅಲ್ಲ ಇಡೀ ಊರಿನ ಸೌಹಾರ್ದತೆ, ಸಮಾನತೆಯ ಪ್ರತೀಕವಾಗಿದೆ.

ಗೋಪೂಜೆಯ ದಿನ ಸಂಜೆ ಅನೇಕ ಹಳ್ಳಿಗಳಲ್ಲಿ ದನಬೈಲು ಎಂಬ ವಿಶಿಷ್ಟ ಆಚರಣೆ ಉತ್ಸಾಹದಿಂದ ನಡೆಯಿತು. ಶೃಂಗರಿಸಿದ ಊರಿನ ಎಲ್ಲ ಜಾನುವಾರುಗಳನ್ನು ಬಯಲಿಗೆ ಕರೆತಂದು ಅಲ್ಲಿ ಸಾಹಸ ಕ್ರೀಡೆಗಳು ಜರುಗುತ್ತವೆ. ಈ ಆಚರಣೆಯಲ್ಲಿ ಊರಿನ ಯುವಕರು, ಉತ್ಸಾಹಿಗಳು ಜಾತಿ ಬೇಧವಿಲ್ಲದೆ ಪಾಲ್ಗೊಳ್ಳುತ್ತಾರೆ. ಯುವಕರ ನಗರ ವಲಸೆಯಿಂದ ದನಬೈಲು ಆಚರಣೆ ಅನೇಕ ಕಡೆಗಳಲ್ಲಿ ಕಣ್ಮರೆಯಾದರೂ ಕೆಲವೆಡೆಗಳಲ್ಲಿ ಇನ್ನೂ ಆಚರಣೆಯಲ್ಲಿರುವುದು ಆಶಾದಾಯಕವಾಗಿದೆ.

ಮುಸ್ಸಂಜೆಯಾಗುತ್ತಿದ್ದಂತೆ ಮಹಿಳೆಯರಿಗೆ ವಿಶೇಷ ಕೆಲಸ. ಶಿಂಡೆಲೆಕಾಯಿಯಿಂದ ಸಿದ್ಧಪಡಿಸಿದ ಆರತಿಯನ್ನು ಬೆಳಗಿ ಮಹಿಳೆಯರು ಶೃಂಗಾರಗೊಂಡಿದ್ದ ಗೋವಿಗೆ ದೃಷ್ಠಿ ತೆಗೆದರು. ಮಂಗಳವಾರ ದೇವರ ಮನೆಯಲ್ಲಿ ಸ್ಥಾಪನೆಯಾಗಿದ್ದ ಬಲೀಂದ್ರನನ್ನು ತುಳಸಿ ಕಟ್ಟೆ ಬಳಿ ತಂದು ಕಳುಹಿಸಿಕೊಟ್ಟರು.
 
ಆತನಿಗೆ ಹಿಂದಿರುಗಲು ದಾರಿ ಕಾಣಲೆಂದು ಮನೆಯ ಸುತ್ತ ನಾಲ್ಕು ದಿಕ್ಕುಗಳಲ್ಲಿ ದಿಪ್ಪಣಗೆ ಕೋಲು ನೆಟ್ಟು ದೀಪ ಬೆಳಗಿದರು. ಇಂತಹ ವಿಶಿಷ್ಟ ಜಾನಪದ ಸಮ್ಮಿಳಿತ ಆಚರಣೆಗಳೊಂದಿಗೆ ದೀಪಾವಳಿ ಹಬ್ಬ ಮುಕ್ತಾಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.