ADVERTISEMENT

ಜಿಲ್ಲೆಯಲ್ಲಿ ಮಳೆ ಕ್ಷೀಣ: ತಗ್ಗಿದ ಪ್ರವಾಹ

ವರದೆ ಪ್ರವಾಹ: ಬನವಾಸಿ-ಮೊಗಳ್ಳಿ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 6:29 IST
Last Updated 5 ಆಗಸ್ಟ್ 2013, 6:29 IST

ಕಾರವಾರ: ಜಿಲ್ಲೆಯಾದ್ಯಂತ ಭಾನುವಾರ ಮಳೆ ಕ್ಷೀಣಿಸಿತ್ತು. ಕೆಲವೆಡೆ ಸಾಧಾರಣ ಮಳೆಯಾಗಿದ್ದು, ಶರಾವತಿ ಹಾಗೂ ಅಘನಾಶಿನಿ ನದಿಯಲ್ಲಿ ಪ್ರವಾಹ ಪೂರ್ಣ ತಗ್ಗಿದೆ.

ಕರಾವಳಿಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಕೆಲ ಸಮಯ ತುಂತುರು ಮಳೆಯಾಗಿದ್ದು, ಮೋಡಕವಿದ ವಾತಾವರಣವಿತ್ತು. ಅರೆಬಯಲುಸೀಮೆ ಪ್ರದೇಶಗಳಾದ ಹಳಿಯಾಳ, ದಾಂಡೇಲಿ, ಮುಂಡಗೋಡ ಹಾಗೂ ಮಲೆನಾಡಿನ ಯಲ್ಲಾಪುರ, ಶಿರಸಿ ಹಾಗೂ ಸಿದ್ಧಾಪುರದಲ್ಲಿ ಮಳೆ ಕಡಿಮೆಯಾಗಿತ್ತು.

ಕ್ರೆಸ್ಟ್‌ಗೇಟ್ ಬಂದ್: ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಕದ್ರಾ ಹಾಗೂ ಕೊಡಸಳ್ಳಿ ಜಲಾಶಯಗಳಿಂದ ಹೊರಬಿಡಲಾಗುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ಎರಡೂ ಜಲಾಶಯದ ಕ್ರೆಸ್ಟ್‌ಗೇಟ್‌ಗಳನ್ನು ಭಾನುವಾರ ಮುಚ್ಚಲಾಗಿದೆ.

ಮರ ಉರುಳಿ ಹಾನಿ
ಯಲ್ಲಾಪುರ: ತಾಲ್ಲೂಕಿನಲ್ಲಿ ಸುರಿದ ಮಳೆಗೆ ಹುಕ್ಕಳಿ ಗ್ರಾಮದ ಕೃಷ್ಣ ಭಟ್ಟ ದುರ್ಗದ ಎಂಬುವವರ ಮನೆ ಹಾಗೂ ಕೊಟ್ಟಿಗೆ ಮೇಲೆ ಏಕಕಾಲಕ್ಕೆ ಮೂರು ಮರಗಳು ಉರುಳಿ ಬಿದ್ದು ಅಪಾರ ಹಾನಿ ಸಂಭವಿಸಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಇಲಾಖೆಯ ಅಧಿಕಾರಿಗಳಾದ ಎಸ್.ವಿ.ಪಾಟೀಲ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯೋಗೇಂದ್ರ, ಹಾಗೂ  ಗ್ರಾ.ಪಂ.ಅಧ್ಯಕ್ಷ ನಾಗರಾಜ ಕೈಟ್ಕರ್ ಭೇಟಿ ನೀಡಿ, ಹಾನಿ ವಿವರ ಪಡೆದಿದ್ದಾರೆ.

ಸಂಚಾರ ಸ್ಥಗಿತ
ಶಿರಸಿ: ತಾಲ್ಲೂಕಿನಲ್ಲಿ ಭಾನುವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಆಗಾಗ ತಂತುರು ಮಳೆಯಾಗುತ್ತಿದೆ. ಬನವಾಸಿ ಭಾಗದಲ್ಲಿ ವರದಾ ನದಿಗೆ ಬಂದಿರುವ ಪ್ರವಾಹ ಮುಂದುವರಿದಿದ್ದು, ಬನವಾಸಿ-ಮೊಗಳ್ಳಿ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆ ಮೂರು ದಿನಗಳ ಹಿಂದೆ ನೀರಿನಲ್ಲಿ ಮುಳುಗಿದ್ದು, ಯಥಾಸ್ಥಿತಿಯಲ್ಲಿದೆ.
ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಯಾವುದೇ ಅಪಾಯದ ಸ್ಥಿತಿ ಇಲ್ಲ ಎಂದು ಉಪತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.