ಶಿರಸಿ: ಗ್ರಾಹಕರು ತೂಕದಲ್ಲಿ ಕೊಂಡುಕೊಳ್ಳುವ ವಸ್ತುಗಳಿಗೆ ಅಂಗಡಿಕಾರರಿಂದ ಅನ್ಯಾಯ ಆಗದಂತೆ ನಿಗಾವಹಿಸುವ ಸರ್ಕಾರಿ ಇಲಾಖೆಯ ಕಚೇರಿಯೊಂದು ನಾಲ್ಕಾರು ತಿಂಗಳುಗಳಿಂದ ಕದ ಮುಚ್ಚಿದ ಸ್ಥಿತಿಯಲ್ಲಿದ್ದು, ಕಚೇರಿ ಕೆಲಸಕ್ಕೆ ಬರುವವರು ಬೀಗ ಜಡಿದ ಬಾಗಿಲು ನೋಡಿ ವಾಪಸ್ಸಾಗುವಂತಾಗಿದೆ.
ಇಲ್ಲಿನ ಹಳೆ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿರುವ ಉಪ ವಿಭಾಗ ವ್ಯಾಪ್ತಿಯ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಗೆ ತೆರಳಿದರೆ ಬೀಗ ಹಾಕಿರುವ ಸರಳಿನ ಬಾಗಿಲು, ಚಿಕ್ಕರಂಧ್ರದಿಂದ ತೂರಿ ಬರುವ ಬೆಳಕಿನಲ್ಲಿ ಕೊಠಡಿ ಒಳಗಿರುವ ದೂಳು ಹಿಡಿದಿರುವ ಕಡತಗಳು, ಅನಾಥವಾಗಿರುವ ಮೇಜು ಹಾಗೂ ಕುರ್ಚಿ ಇವಿಷ್ಟು ಕಾಣಸಿಗುತ್ತವೆ. ಸುಮಾರು ಆರು ತಿಂಗಳ ಹಿಂದೆ ಇಲ್ಲಿರುವ ಏಕೈಕ ಉಪ ನಿರೀಕ್ಷಕ ಹುದ್ದೆ ತೆರವಾಗಿದ್ದರೂ ಇನ್ನೂ ತನಕ ಈ ಹುದ್ದೆ ಭರ್ತಿಯಾಗಿಲ್ಲ.
ಅಂಗಡಿಕಾರರ ಅಂಗಡಿಯಲ್ಲಿರುವ ತೂಕ ಹಾಗೂ ಅಳತೆ ಮಾಡುವ ಯಂತ್ರವನ್ನು ಪರಿಶೀಲಿಸಿ ಅದಕ್ಕೆ ದೃಢೀಕೃತ ಪತ್ರ ನೀಡುವುದು ಈ ಇಲಾಖೆಯ ಕೆಲಸ. ಅಂಗಡಿಕಾರರು ತಮ್ಮ ಅಂಗಡಿಯಲ್ಲಿರುವ ತೂಕದ ಕಲ್ಲು ಅಥವಾ ಎಲೆಕ್ಟ್ರಾನಿಕ್ ಯಂತ್ರವನ್ನು ಗುತ್ತಿಗೆದಾರರ ಮೂಲಕ ಪರೀಕ್ಷಿಸಿ, ಇಲಾಖೆಯ ನಿರೀಕ್ಷಕರ ಸಹಿ ಇರುವ ಅನುಮತಿ ಪತ್ರ ಪಡೆಯುತ್ತಾರೆ. ತೂಕದ ಕಲ್ಲನ್ನು ಪ್ರತಿ ವರ್ಷ ಹಾಗೂ ಎಲೆಕ್ಟ್ರಾನಿಕ್ ಯಂತ್ರವನ್ನು ಎರಡು ವರ್ಷಕ್ಕೊಮ್ಮೆ ಪರೀಕ್ಷೆಗೆ ಒಳಪಡಿಸಿ ಅನುಮತಿ ಪತ್ರ ಪಡೆದುಕೊಳ್ಳುವ ನಿಯಮ ಪ್ರತಿ ಅಂಗಡಿಕಾರರಿಗೆ ಕಡ್ಡಾಯವಾಗಿದೆ.
ಅಳತೆಯ ಮಾಪನದ ದೋಷದಿಂದ ಗ್ರಾಹಕನಿಗೆ ಅನ್ಯಾಯವಾಗಬಾರದು ಎಂಬುದು ಇದರ ಪ್ರಮುಖ ಉದ್ದೇಶವಾಗಿದೆ. ಅಳತೆ ಅಥವಾ ತೂಕದ ಮೂಲಕ ವಸ್ತುಗಳನ್ನು ಖರೀದಿಸಿದ ಗ್ರಾಹಕನಿಗೆ ದೋಷವಿರುವ ಅನುಮಾನ ಬಂದಲ್ಲಿ ಆತ ದೂರು ನೀಡಿದರೆ ಜಾಗೃತ ದಳ ಅಂತಹ ಅಂಗಡಿಗಳ ಮೇಲೆ ದಾಳಿ ನಡೆಸುತ್ತದೆ. ಕೆಲವೊಮ್ಮೆ ಸ್ವಯಂ ಇಚ್ಛೆಯಿಂದ ಸಹ ಜಾಗೃತ ದಳ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂಗಡಿಕಾರರು ಮಾಪನದ ದೃಢೀಕೃತ ಪತ್ರವನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ.
ಪ್ರಸ್ತುತ ಕಚೇರಿದ ಕದ ತೆರೆಯದ ಕಾರಣ ಅನುಮತಿ ಪತ್ರ ನವೀಕರಿಸಿಕೊಳ್ಳಲು ಸಾಧ್ಯವಾಗದೆ ಕಚೇರಿ ವ್ಯಾಪ್ತಿಯಲ್ಲಿ ಬರುವ ಶಿರಸಿ, ಯಲ್ಲಾಪುರ, ಸಿದ್ದಾಪುರ ಹಾಗೂ ಮುಂಡಗೋಡ ತಾಲ್ಲೂಕುಗಳ ಅನೇಕ ಅಂಗಡಿಕಾರರು ತೊಂದರೆ ಅನುಭವಿಸುವಂತಾಗಿದೆ. ಹಿಂದೆ ಇದ್ದ ಅಧಿಕಾರಿ ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ನಂತರ ಆ ಸ್ಥಾನಕ್ಕೆ ಬೇರೆ ಅಧಿಕಾರಿಯನ್ನು ನೇಮಿಸುವ ಕಾರ್ಯ ಇನ್ನೂ ಆಗಿಲ್ಲ.
`ಅನುಮತಿ ಪತ್ರ ನವೀಕರಣಕ್ಕಾಗಿ ಡಿಸೆಂಬರ್‌ನಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ನಿರೀಕ್ಷಕರ ಕಚೇರಿ ತಿಳಿಸಲಾಗಿದೆ. ಇನ್ನೂ ತನಕ ಉಪವಿಭಾಗ ವ್ಯಾಪ್ತಿಯ ಈ ಹುದ್ದೆ ಭರ್ತಿಯಾಗಿಲ್ಲದ ಕಾರಣ ಅನುಮತಿ ಪತ್ರ ದೊರೆತಿಲ್ಲ. ಶಿರಸಿ ತಾಲ್ಲೂಕು ಒಂದರಲ್ಲೇ 10ಸಾವಿರಕ್ಕೂ ಹೆಚ್ಚು ಅಂಗಡಿಗಳಿವೆ. ಅನುಮತಿ ಅವಧಿ ಮುಗಿದ ಅಂಗಡಿಕಾರರು ಮಾಪನ ಪತ್ರ ಪಡೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
`ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಶೀಘ್ರ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ' ಎನ್ನುತ್ತಾರೆ ಹೋಲ್‌ಸೇಲ್ ವ್ಯಾಪಾರಸ್ಥ ಹಾಗೂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ.ಜಿ.ಹೆಗಡೆ ಕಡೆಕೋಡಿ.
ಸ್ಥಳೀಯರು ಹೇಳುವಂತೆ ಈ ಕಚೇರಿ ಬಾಗಿಲು ತೆರೆಯದೆ ಆರು ತಿಂಗಳಾಗಿವೆ, ಆದರೆ ಜಿಲ್ಲಾ ಕಚೇರಿ ನಿರೀಕ್ಷಕರು ಮೂರು ತಿಂಗಳಿನಿಂದ ಹುದ್ದೆ ಖಾಲಿ ಇದ್ದು, ಸದ್ಯವೇ ಅಧಿಕಾರಿ ನೇಮಕವಾಗಲಿದೆ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.