ADVERTISEMENT

ದೆಹಲಿಯಲ್ಲಿ ಧ್ವನಿ ಎತ್ತಿದ ಸಂಸದರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:41 IST
Last Updated 19 ಡಿಸೆಂಬರ್ 2013, 6:41 IST

ಶಿರಸಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಯುವ ಪ್ರದೇಶ ಸಂಸದರ ನಿಯೋಗವು ಮಂಗಳವಾರ ಕೃಷಿ ಸಚಿವ ಶರದ್‌ ಪವಾರ್‌ ಅವರನ್ನು ಭೇಟಿ ಯಾಗಿ ಅಡಿಕೆ ನಿಷೇಧ ಪ್ರಸ್ತಾವವನ್ನು ಪುನರ್‌ ಪರಿಶೀಲಿಸಬೇಕು ಎಂದು ವಿನಂತಿಸಿತು.

ದೇಶದ 12 ರಾಜ್ಯಗಳಲ್ಲಿ ಸುಮಾರು 6.3 ಲಕ್ಷ ಟನ್‌ ಅಡಿಕೆ ಬೆಳೆಯಲಾಗುತ್ತಿದ್ದು, ಕೋಟ್ಯಂತರ ಕುಟುಂಬಗಳು, ಪ್ರಾಥಮಿಕ ಸಹಕಾರಿ ಸಂಘಗಳು, ಸಣ್ಣ ವ್ಯಾಪಾರಸ್ಥರು ಇದನ್ನೇ ನಂಬಿದ್ದಾರೆ.

ಹಿಂದಿನಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಹಾಸುಹೊಕ್ಕಾಗಿರುವ ಅಡಿಕೆಯನ್ನು ಈಗ ಹಾನಿಕಾರಕ ಎಂದು ಬಿಂಬಿಸಲಾ ಗುತ್ತಿದೆ. 2007ರಲ್ಲಿ ಕರ್ನಾಟಕ ಹೈಕೋರ್ಟ್‌ ಅಡಿಕೆಯಲ್ಲಿ ಹಾನಿಕಾರಕ ಅಂಶಗಳಿಗಿಂತ ಹೆಚ್ಚಾಗಿ ಉಪಯುಕ್ತ ಅಂಶಗಳಿವೆ ಎಂಬ ಸಂಗತಿಯನ್ನು ಎತ್ತಿ ಹಿಡಿದಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾಡಿರುವ ಕ್ಷಾರಗುಣವುಳ್ಳ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಅಡಿಕೆಯಲ್ಲಿ ಅತ್ಯಂತ ಕಡಿಮೆ ಕ್ಷಾರ ಗುಣವಿದೆ ಎಂಬ ಸಂಗತಿಯನ್ನು ತಿಳಿಸಲಾಗಿದೆ.

ಕೇಂದ್ರ ಸರ್ಕಾರ 2011ರಲ್ಲಿ ಮಾರ್ಕೆಟ್‌ ಇಂಟರ್‌್ವೆಂಶನ್‌ ಯೋಜನೆ ಅಡಿಯಲ್ಲಿ ಅಡಿಕೆಗೆ ದೊಡ್ಡ ಪ್ರಮಾಣದಲ್ಲಿ ಸಹಾಯಧನ ಸೌಲಭ್ಯ ನೀಡಿ ಪ್ರೋತ್ಸಾಹಿಸಿದೆ ಎಂದು ಕೃಷಿ ಸಚಿವರಿಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಅಡಿಕೆ ನಿಷೇಧ ಪ್ರಸ್ತಾವ ಹಿಂಪಡೆಯಬೇಕು ಇಲ್ಲವಾ ದಲ್ಲಿ ರೈತರೊಂದಿಗೆ ಸೇರಿ ಹೋರಾಟ ನಡೆಸಲಾಗುವುದು ಎಂದು ನಿಯೋಗ ದಲ್ಲಿದ್ದ ಸಂಸದರಾದ ಅನಂತಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟೀಲು, ಆಯನೂರು ಮಂಜುನಾಥ, ಬಿ.ವೈ. ರಾಘವೇಂದ್ರ ತಿಳಿಸಿದರು ಎಂದು ಸ್ಥಳೀಯ ಸಂಸದರ ಆಪ್ತ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.