ADVERTISEMENT

ದೊಡ್ಡ ಹಬ್ಬದಲ್ಲಿ ಬಾಲಕ್ಕೊಂದು ಕಾಯಿ!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:40 IST
Last Updated 27 ಅಕ್ಟೋಬರ್ 2011, 10:40 IST

ಸಿದ್ದಾಪುರ: ತಾಲ್ಲೂಕಿನ ಗ್ರಾಮೀಣ ಭಾಗದ ಜನರಿಗೆ ದೀಪಾವಳಿಯೆಂದರೆ `ದೊಡ್ಡ ಹಬ್ಬ~. ಆದ್ದರಿಂದ ಈ ಹಬ್ಬದಲ್ಲಿ ಹಳ್ಳಿಗರು ಮನೆಯ ದೇವರಿಗಲ್ಲದೇ ತೋಟ, ಬೆಟ್ಟ, ಬೇಣ, ಕಾಡುಗಳಲ್ಲಿರುವ ದೇವರುಗಳಿಗೂ ಪೂಜೆ ಸಲ್ಲಿಸುತ್ತಾರೆ.

ದೇವರ ಬನಗಳಲ್ಲಿರುವ ಕಲ್ಲುಗಳನ್ನು ಚೌಡಿ, ಯಕ್ಷಿ, ಭೂತ, ನಾಗ ಇತ್ಯಾದಿ ಹೆಸರಿನಲ್ಲಿ ಆರಾಧಿಸುವ ಹಳ್ಳಿಯ ಜನ, `ದೊಡ್ಡ ಹಬ್ಬ~ದಲ್ಲಿ ಗೋವಿಗೆ ಪೂಜೆ ಸಲ್ಲಿಸುವಂತೆ ಗ್ರಾಮ ದೇವರುಗಳಿಗೂ ಪೂಜೆ ಸಲ್ಲಿಸುವ ವಾಡಿಕೆ ಹೊಂದಿದ್ದಾರೆ.

ಹುಲಿಗೂ ಪೂಜೆ: ವಿವಿಧ ಹೆಸರಿನ ದೇವರ ಕಲ್ಲುಗಳಿಗೆ ಪೂಜೆ ಮಾಡುವ ಸಂದರ್ಭದಲ್ಲಿಯೇ ಹುಲಿಯನ್ನೂ `ಹುಲಿ ದೇವರು~ ಎಂದು ಭಕ್ತಿಯಿಂದ ಪೂಜೆ ಸಲ್ಲಿಸುವ ಸಂಪ್ರದಾಯ ಕೂಡ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿದೆ. ಗೋವಿಗೆ ಪೂಜೆ ಸಲ್ಲಿಸುವವರೇ ಗೋವಿನ ಹಂತಕನಾಗಿರುವ ಹುಲಿಗೂ ಪೂಜೆ ಸಲ್ಲಿಸುವದು ವಿಶೇಷ. ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಹುಲಿ ದೇವರ ಬನಗಳಿವೆ.

 ಈ ಬನಗಳಲ್ಲಿ ಹುಲಿ ದೇವರ ಕಲ್ಲಿನ ಪ್ರತಿಮೆಗಳಿರುತ್ತವೆ. ಕೆಲವೊಂದು ಹಳ್ಳಿಗಳಲ್ಲಿ ಹುಲಿದೇವರ ಕಲ್ಲುಗಳು ಕೇವಲ ಕಲ್ಲಿನಂತಿದ್ದು ಹುಲಿಯನ್ನೂ ಕೂಡ ಹೋಲುವದಿಲ್ಲ. ಆದರೂ ಗ್ರಾಮೀಣ ಜನರು ಆ ಕಲ್ಲನ್ನೇ ಹುಲಿ ದೇವರು ಎಂದು ಆರಾಧಿಸುತ್ತಾರೆ.
 
ಹುಲಿ ದೇವರಿಗೆ ಪೂಜೆ ಸಲ್ಲಿಸುವಾಗ `ಬಾಲ ಕ್ಕೊಂದು ಕಾಯಿ~ (ಅಂದರೆ ಮನೆಯಲ್ಲಿ ಇರುವ ಹಸು ಮತ್ತು ಎಮ್ಮೆಗಳಿಗೆ ತಲಾ ಒಂದರಂತೆ) ಒಡೆಯುವ ಪದ್ಧತಿಯಿದೆ. ಹಿಂದಿನ ಕಾಲದಲ್ಲಿ ಮಲೆನಾಡಿನ ಈ ಭಾಗದಲ್ಲಿ ವಿಪರೀತವಾಗಿದ್ದ ಹುಲಿ ಕಾಟವೇ ಈ ಪೂಜಾ ವಿಧಾನ ಆರಂಭಕ್ಕೆ ಕಾರಣ ಆಗಿರಬಹುದು.

ಕೆಲವೊಂದು ಊರುಗಳಲ್ಲಿ ದೀಪಾವಳಿಯಂದು ಹುಲಿ ದೇವರ ಬನಗಳಿಗೆ ಜನರು ಪ್ರವೇಶ ಮಾಡುವದಿಲ್ಲ. ಆದ್ದರಿಂದ ಸಮೀಪದ ತೋಟದಲ್ಲಿಯೋ ಬೆಟ್ಟದಲ್ಲಿಯೋ ಇರುವ ದೇವರ ಕಲ್ಲುಗಳಿಗೆ ಹುಲಿ ದೇವರ ಹೆಸರಿನಲ್ಲಿ ಪೂಜೆ ಸಲ್ಲಿಸುವ ಪದ್ಧತಿ ಕೂಡ ಕಂಡು ಬರುತ್ತದೆ.

ಗ್ರಾಮೀಣ ಜನರ ಪಾಲಿಗೆ ದೊಡ್ಡ ಹಬ್ಬವೇ ಆಗಿರುವ ದೀಪಾವಳಿಯಂದು ರೈತಾಪಿ ಜನ ತಮ್ಮ ಕೃಷಿ ಕೆಲಸದ ಎಲ್ಲ ಪರಿಕರಗಳನ್ನು ತಪ್ಪದೇ ಪೂಜಿಸುತ್ತಾರೆ. ಗುದ್ದಲಿ, ಬುಟ್ಟಿ, ಹಾರೆ, ಸನಿಕೆ, ಕತ್ತಿ, ಕೊಡಲಿಗಳಿಗೆಲ್ಲ ಪೂಜೆ ಮಾಡುತ್ತಾರೆ. ಇದರೊಂದಿಗೆ ದೀಪಾವಳಿಯ ರಾತ್ರಿ ಹಾಡುವ ಬಿಂಗಿ ಪದಗಳು ಮತ್ತು ಮನೆಮನೆಗೆ ಹೋಗಿ ಕೋಲಾಟ ಆಡುವ ಪದ್ಧತಿಯೂ ವಿಶಿಷ್ಟವಾದ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮಾಧ್ಯಮಗಳಾಗಿವೆ.

ಈಗೀಗ ಬಿಂಗಿ ತಂಡಗಳು ಮತ್ತು ಕೋಲಾಟದ ಪಂಗಡಗಳು  ತಾಲ್ಲೂ ಕಿನಲ್ಲಿ ವಿರಳವಾಗಿವೆ. ಇದರೊಂದಿಗೆ ಆಧುನಿಕ ಕಾಲ ಮತ್ತು  ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ `ದೊಡ್ಡ ಹಬ್ಬ~ವೂ ಬದಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.