ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಶುಕ್ರವಾರ ಮಳೆ ಸ್ವಲ್ಪ ಬಿಡುವು ನೀಡಿತು. ಆದರೆ, ಅಂಕೋಲಾ ಹಳಿಯಾಳ, ಜೋಯಿಡಾ, ಯಲ್ಲಾ ಪುರ, ಶಿರಸಿ, ಮುಂಡಗೋಡ ಹಾಗೂ ಸಿದ್ದಾಪುರ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ನಗರದ ಬೈತಕೋಲ ಜೈಲ್ ವಾಡಾದಲ್ಲಿ ಮಾವಿನಮರದ ಟೊಂಗೆಯೊಂದು 11 ಕೆವಿ ಲೈನ್‌ಗಳ ಮೇಲೆ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಧರೆಗುರುಳಿವೆ. ಒಂದು ಕಂಬದ ಮೇಲ್ಭಾಗ ಮುರಿದಿದೆ.
ಗುರುವಾರ ರಾತ್ರಿ 11ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ನಡೆದ ಬಳಿಕ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಸಂಚಾರವೂ ಸ್ಥಗಿತಗೊಂಡಿತ್ತು.
ಬೈತಖೋಲ ಊರಿಗೆ ಹೊಂದಿಕೊಂಡಿರುವ ಸೀಬರ್ಡ್ ಆವರಣದೊಳಗಿದ್ದ ಮರವೊಂದು ಬಿದ್ದ ಪರಿಣಾಮ ಪ್ರಶಾಂತ ಗೌಡ ಎಂಬುವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ.
ಅಸಮಾಧಾನ: ಸೀಬರ್ಡ್ ಆವರಣದೊಳಗಿರುವ ಮರಗಳು ಪ್ರತಿವರ್ಷ ಮಳೆಗಾಲದಲ್ಲಿ ಮಳೆ, ಗಾಳಿಗೆ ಬೀಳುತ್ತಿರುತ್ತವೆ. ಈ ಬಗ್ಗೆ ಸೀಬರ್ಡ್ ನೌಕಾನೆಲೆಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಮಳೆಗಾಲದಲ್ಲಿ ಇದೇ ರೀತಿಯಾಗಿ ಮರವೊಂದು ಬಿದ್ದು ಮನೆಗೆ ಹಾನಿಯಾಗಿತ್ತು. ಅಲ್ಲಿಗೆ ಬಂದ ನೌಕಾನೆಲೆಯ ಪೊಲೀಸರು ಹತ್ತಾರು ಫೋಟೊಗಳನ್ನು ಹೊಡೆದುಕೊಂಡು ಹೋದರೆ ಹೊರತು ಯಾವುದೇ ಪರಿಹಾರ ನೀಡಲಿಲ್ಲ ಎಂದು ಶ್ರೀಧರ ಗೌಡ ದೂರಿದರು.
ಜಿಲ್ಲೆಯಲ್ಲಿ 49.5 ಸೆಂ. ಮೀ. ಮಳೆ: ಶುಕ್ರವಾರ ಬೆಳಿಗ್ಗೆ 8ಕ್ಕೆ ಕೊನೆಗಳು ಜಿಲ್ಲೆಯಾದ್ಯಂತ 49.5 ಮಿ.ಮೀ ಮಳೆಯಾಗಿದೆ. ಅಂಕೋಲಾ- 89.4, ಭಟ್ಕಳ- 39.6, ಹಳಿಯಾಳ- 19.8, ಹೊನ್ನಾವರ 29.8, ಕಾರವಾರ 89.4, ಕುಮಟಾ 33.2, ಮುಂಡಗೋಡ 13.2, ಸಿದ್ದಾಪುರ 75.4, ಶಿರಸಿ 87.5, ಜೋಯಿಡಾ 34.4 ಹಾಗೂ ಯಲ್ಲಾಪುರದಲ್ಲಿ 32.6ಮಿ.ಮೀ ಮಳೆಯಾಗಿದೆ. ಜೂನ್ 1 ರಿಂದ 14 ರವರೆಗೆ ಸರಾಸರಿ 348.4 ಮಿ.ಮೀ ಮಳೆಯಾಗಿದೆ.
ದಾಖಲೆ ಮಳೆ
ಸಿದ್ದಾಪುರ: ತಾಲ್ಲೂಕಿನಾದ್ಯಂತ ಶುಕ್ರವಾರ ಮಳೆಯ ಅಬ್ಬರ ಇಳಿಮುಖವಾಗಿದ್ದರೂ ಗುರು ವಾರ ಬೆಳಗಿನಿಂದ ಶುಕ್ರವಾರ ಬೆಳಗಿನವರೆಗಿನ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಅಧಿಕ ಮಳೆ ದಾಖಲಾಗಿದೆ.
ಗುರುವಾರ ಬೆಳಿಗ್ಗೆ ಆರಂಭವಾಗಿದ್ದ ಭಾರಿ ಮಳೆ ಶುಕ್ರವಾರ ಬೆಳಗಿನವರೆಗೂ ತಾಲ್ಲೂಕಿ ನಾದ್ಯಂತ ಧಾರಾಕಾರವಾಗಿಯೇ ಸುರಿಯಿತು,ನಂತರ ಬಿಡುವು ನೀಡುತ್ತ ಸುರಿದು, ಮಧ್ಯಾಹ್ನದ ನಂತರ ಕಡಿಮೆಯಾಯಿತು.
ಶುಕ್ರವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ನಿಲ್ಕುಂದದಲ್ಲಿ 218.8 ಮಿ.ಮೀ.ಯಷ್ಟು ಭಾರಿ ಮಳೆ ಸುರಿ ದಿದ್ದರೆ, ಹಲಗೇರಿಯಲ್ಲಿ 90.4 ಮಿ.ಮೀ. ಅರೆಂದೂರಿನಲ್ಲಿ 93.6 ಮಿ.ಮೀ. ತ್ಯಾಗಲಿಯಲ್ಲಿ 130 ಮಿ.ಮೀ. ಮಳೆ ದಾಖಲಾಗಿದೆ. ಪಟ್ಟಣ ದಲ್ಲಿ 75.4 ,ಮಿ.ಮೀ. ಮಳೆ ಬಿದ್ದಿದ್ದು, ಇದುವರೆಗೆ ಒಟ್ಟು 315.6 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನದವರೆಗೆ 174.8 ಮಿ.ಮೀ ಮಳೆ ದಾಖಲಾಗಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ಜನಜೀವನ ಅಸ್ತವ್ಯಸ್ತ
ಶಿರಸಿ: ತಾಲ್ಲೂಕಿನಲ್ಲಿ ಶುಕ್ರವಾರ ಸಹ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಕೊನೆ ಗೊಂಡಂತೆ 24 ಗಂಟೆಗಳಲ್ಲಿ ಒಟ್ಟೂ 87ಮಿಮೀ ಮಳೆ ದಾಖಲಾಗಿದೆ.
ಬೆಳಿಗ್ಗೆಯಿಂದ ದಟ್ಟ ಮೋಡ ಕವಿದ ವಾತಾವರಣವಿದ್ದು, ಗಾಳಿ ಜೊತೆಗೆ ರಭಸದಿಂದ ಮಳೆ ಸುರಿಯಿತು. ತಾಲ್ಲೂಕಿನ ಹೆಗಡೆಕಟ್ಟಾ ಸಮೀಪ ಅಕ್ಕಿಗದ್ದೆಯಲ್ಲಿ ಓಮು ಮರಾಠಿ ಎಂಬುವರ ಮನೆಯ ಮೇಲೆ ಬೃಹತ್ ಮರ ಮುರಿದು ಬಿದ್ದ ಪರಿಣಾಮ ಸಾವಿರಕ್ಕೂ ಅಧಿಕ ಹಂಚು ಪುಡಿಯಾಗಿದ್ದು, ಮನೆ ಯಲ್ಲಿದ್ದ ಟಿ.ವಿ. ಸೇರಿದಂತೆ ಅನೇಕ ಸಾಮಾನು ಗಳಿಗೆ ಧಕ್ಕೆಯಾಗಿದೆ. ರೂ 80 ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಪಟ್ಟಣದ ದುಂಡಶಿನಗರದಲ್ಲಿ ಮಳೆಯ ಅಬ್ಬರಕ್ಕೆ ಆವರಣಗೋಡೆಯೊಂದು ಕುಸಿದುಬಿದ್ದಿದೆ. ತಾಲ್ಲೂಕಿನಲ್ಲಿ ಈವರೆಗೆ ಒಟ್ಟೂ 442ಮಿಮೀ ಮಳೆ ದಾಖಲಾಗಿದೆ.
ಕೋಡಿ ಕಡಿದು ಸಮುದ್ರಕ್ಕೆ ನೀರು ಬಿಟ್ಟ ಗ್ರಾಮಸ್ಥರು!
ಅಂಕೋಲಾ: ಪೂಜಗೇರಿ ಹಳ್ಳದ ನೀರು ಸಮುದ್ರಕ್ಕೆ ಸೇರಲು ಉಸುಕಿನ ದಿಬ್ಬ ಅಡ್ಡವಾಗಿ ರುವುದರಿಂದ ಶುಕ್ರವಾರ ನದಿಭಾಗ ಸಮುದ್ರ ತೀರದಲ್ಲಿ ಸ್ಥಳೀಯರು ಉಸುಕಿನ ದಿಬ್ಬವನ್ನು ಕಡಿದು ನದಿ ನೀರನ್ನು ಸಮುದ್ರಕ್ಕೆ ಬಿಟ್ಟು ಕೊಟ್ಟರು.
ಪ್ರತಿ ವರ್ಷವು ಕೂಡ ಈ ಕಾರ್ಯ ನಡೆ ಯುತ್ತಾ ಬಂದಿದ್ದು, ಇದು ಪ್ರಕೃತಿ ಸೃಷ್ಟಿಸಿದ ಸಮಸ್ಯೆ ಎಂಬಂತಾಗಿದೆ. ಮಳೆಗಾಲದಲ್ಲಿ ಪೂಜ ಗೇರಿ ಹಳ್ಳದ ನೀರು ಸರಾಗವಾಗಿ ಸಮುದ್ರ ಸೇರು ವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಆ ಮಳೆಗಾಲ ಮುಗಿದ ನಂತರ ನದಿಯ ಒಳಹರಿವು ನಿಲ್ಲುವುದರಿಂದ ಸಮುದ್ರದ ಸಂಗಮದಲ್ಲಿ ಸಹಜವಾಗಿಯೇ ಉಸುಕು ತುಂಬಿ ನದಿ ಮತ್ತು ಸಮುದ್ರದ ಸಂಪರ್ಕವನ್ನೇ ಕಡಿದುಹಾಕುತ್ತಾರೆ. ಹೀಗಾಗಿ ಮಳೆಗಾಲ ಪ್ರಾರಂಭಗೊಂಡಾಗ ನದಿ ನೀರು ಸಮುದ್ರ ಸೇರಲಾಗದೇ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಳ್ಳುತ್ತದೆ.
ಹೀಗಾಗಿ ಸ್ಥಳೀಯ ಬೊಬ್ರುವಾಡ ಗ್ರಾ.ಪಂ.ಸಹಕಾರದಲ್ಲಿ ನದಿ ಮತ್ತು ಸಮುದ್ರದ ಸಂಗಮದಲ್ಲಿ ನಿರ್ಮಾಣಗೊಂಡ ಉಸುಕಿನ ದಿಬ್ಬವನ್ನು ಸ್ಥಳೀಯರು ಕಡಿದು ನದಿ ನೀರು ಸಮುದ್ರಕ್ಕೆ ಹರಿಯುವಂತೆ ಮಾಡುತ್ತಾರೆ. ನಂತರ ನೀರಿನ ಒತ್ತಡ ಅಧಿಕವಾದಂತೆ ಉಸುಕಿನ ದಿಬ್ಬ ಕೊರೆದು ಕೋಡಿಯ ಗಾತ್ರ ಹೆಚ್ಚಿಸಿಕೊಳ್ಳುವುದರಿಂದ ನೀರು ಸರಾಗವಾಗಿ ಸಮುದ್ರ ಸೇರುತ್ತದೆ.
ಹೀಗಾಗಿ ಮತ್ತೆ ಮಳೆಗಾಲ ಮುಗಿಯುವ ತನಕ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹೀಗೆ ಉಸುಕಿನ ದಿಬ್ಬ ಕಡಿಯುವುದಕ್ಕೆ ಕೋಡಿ ಕಡಿಯುವುದು ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.